ಕುಲದೀಪ್ ಪ್ರಹಾರಕ್ಕೆ ನಡುಗಿದ ಆಸೀಸ್

Update: 2017-03-25 18:00 GMT

ಧರ್ಮಶಾಲಾ , ಮಾ.25: ಇಲ್ಲಿ ಆರಂಭಗೊಂಡ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನ್ನು 300 ರನ್‌ಗೆ ಮುಗಿಸಿದ್ದು, ತಂಡದ ಸಹ ಆಟಗಾರರ ವೈಫಲ್ಯದ ನಡುವೆಯೂ ಅಪೂರ್ವ ಫಾರ್ಮ್‌ನ್ನು ಮುಂದುವರಿಸಿರುವ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ಸರಣಿಯಲ್ಲಿ ಮೂರನೆ ಶತಕ ದಾಖಲಿಸಿದ್ದಾರೆ.

 ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭಗೊಂಡ ನಿರ್ಣಾಯಕ ಟೆಸ್ಟ್‌ನಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯದ ನಾಯಕ ಸ್ಮಿತ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆರಂಭದಲ್ಲಿ ತನ್ನ ಲೆಕ್ಕಾಚಾರ ತಲೆಕೆಳಗಾದಂತೆ ಕಂಡು ಬಂದರೂ ಸ್ಮಿತ್ ಶತಕ ದಾಖಲಿಸುವ ಮೂಲಕ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಚೊಚ್ಚಲ ಟೆಸ್ಟ್ ಆಡುತ್ತಿರುವ ಕುಲದೀಪ್ ಯಾದವ್ (68ಕ್ಕೆ 4), ಉಮೇಶ್ ಯಾದವ್(69ಕ್ಕೆ 2), ಆರ್.ಅಶ್ವಿನ್(54ಕ್ಕೆ 1), ರವೀಂದ್ರ ಜಡೇಜ(57ಕ್ಕೆ 1) ಸಂಘಟಿತ ದಾಳಿ ನಡೆಸಿ ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ್ನು ಮೊದಲ ದಿನದ ಆಟ ಕೊನೆಗೊಳ್ಳಲು ಸ್ವಲ್ಪ ಹೊತ್ತು ಬಾಕಿ ಇದ್ದಾಗ ಮುಗಿಸಿದರು. ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ್ನು 88.3 ಓವರ್‌ಗಳಲ್ಲಿ 300 ರನ್‌ಗಳಿಗೆ ನಿಯಂತ್ರಿಸಿದ ಭಾರತ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿ 1 ಓವರ್ ಎದುರಿಸಿದರೂ ಖಾತೆ ತೆರೆಯಲಿಲ್ಲ. ಹೇಝಲ್‌ವುಡ್ ಓವರ್‌ನಲ್ಲಿ ಆರಂಭಿಕ ದಾಂಡಿಗರಾದ ಲೋಕೇಶ್ ರಾಹುಲ್ ಮತ್ತು ಮುರಳಿ ವಿಜಯ್ ಖಾತೆ ತೆರೆಯಲಿಲ್ಲ. ಹೇಝಲ್‌ವುಡ್ ಓವರ್ ಮೇಡನ್ ಆಗಿತ್ತು.
ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ 20ನೆ ಶತಕ ದಾಖಲಿಸಿದರು. ಡೇವಿಡ್ ವಾರ್ನರ್ ಮತ್ತು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಅರ್ಧಶತಕಗಳ ಕೊಡುಗೆ ನೀಡಿದರು.
ಡೇವಿಡ್ ವಾರ್ನರ್ ಜೊತೆ ಇನಿಂಗ್ಸ್ ಆರಂಭಿಸಿದ ರೆನ್‌ಶಾ 1 ರನ್ ಗಳಿಸಿ ಉಮೇಶ್ ಯಾದವ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಉಮೇಶ್ ಯಾದವ್ ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು.
 
 2ನೆ ಓವರ್‌ನ 4ನೇ ಎಸೆತದಲ್ಲಿ ರೆನ್‌ಶಾ(1) ಅವರು ಔಟಾದರು. ಆಗ ತಂಡದ ಸ್ಕೋರ್ 10 ಆಗಿತ್ತು. ಭಾರತ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಗಾಯಾಳು ನಾಯಕ ವಿರಾಟ್ ಕೊಹ್ಲಿ ಕೊನೆಯ ಕ್ಷಣದಲ್ಲಿ ಆಡದಿರುವ ನಿರ್ಧಾರ ಕೈಗೊಂಡರು. ಈ ಕಾರಣದಿಂದಾಗಿ ಮಹತ್ವದ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅಜಿಂಕ್ಯ ರಹಾನೆ ಹೆಗಲೇರಿತು.ಇಶಾಂತ್ ಶರ್ಮ ಬದಲಿಗೆ ಭುವನೇಶ್ವರ ಕುಮಾರ್ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದರು. ಎರಡನೇ ವಿಕೆಟ್‌ಗೆ ಡೇವಿಡ್ ವಾರ್ನರ್‌ಗೆ ನಾಯಕ ಸ್ಮಿತ್ ಜೊತೆಯಾದರು. ಸ್ಮಿತ್ ಮತ್ತು ವಾರ್ನರ್ 134 ರನ್‌ಗಳ ಜೊತೆಯಾಟ ನೀಡಿದರು. ಕುಲದೀಪ್ ಯಾದವ್ ಇವರ ಜೊತೆಯಾಟವನ್ನು ಮುರಿದರು.
ವಾರ್ನರ್(56) ಸರಣಿಯಲ್ಲಿ ಮೊದಲ ಅರ್ಧಶತಕ ದಾಖಲಿಸಿ ಔಟಾದರು. ವಾರ್ನರ್‌ಗೆ ಪೆವಿಲಿಯನ್ ಹಾದಿ ತೋರಿಸುವುದರೊಂದಿಗೆ ಮೊದಲ ವಿಕೆಟ್ ಪಡೆದ ಕುಲದೀಪ್ ಬಳಿಕ ಹ್ಯಾಂಡ್ಸ್‌ಕಂಬ್(8), ಮ್ಯಾಕ್ಸ್‌ವೆಲ್(8),ಪ್ಯಾಟ್ ಕಮಿನ್ಸ್(21) ವಿಕೆಟ್ ಪಡೆದು ಚೊಚ್ಚಲ ಟೆಸ್ಟನ್ನು ಸ್ಮರಣೀಯವನ್ನಾಗಿಸಿದರು.

ಆಸ್ಟ್ರೇಲಿಯ ಭೋಜನಾ ವಿರಾಮದ ಹೊತ್ತಿಗೆ 31 ಓವರ್‌ಗಳಲ್ಲಿ 1ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತ್ತು. ಸ್ಮಿತ್ ಮತ್ತು ವಾರ್ನರ್ ದೊಡ್ಡ ಮೊತ್ತದ ಸ್ಕೋರ್ ದಾಖಲಿಸುವ ಕಡೆಗೆ ಹೆಜ್ಜೆ ಇರಿಸಿದ್ದರು. ಆದರೆ ಕುಲದೀಪ್ ಯಾದವ್ ಅವರು ಆಸ್ಟ್ರೇಲಿಯದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ರಾಂಚಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಾನ್ ಮಾರ್ಷ್ (4) ಅದೇ ಫಾರ್ಮ್‌ನ್ನು ಮುಂದುವರಿಸುವಲ್ಲಿ ಎಡವಿದರು. ಉಮೇಶ್ ಯಾದವ್ ಅವರು ಮಾರ್ಷ್ ಬ್ಯಾಟಿಂಗ್‌ನ್ನು ನಿಯಂತ್ರಿಸಿದರು.
 ಮ್ಯಾಥ್ಯೂ ವೇಡ್ (57) ಅರ್ಧಶತಕದ ಕೊಡುಗೆ ನೀಡಿದರು. ಟೆಸ್ಟ್‌ನಲ್ಲಿ ಇದು ಅವರ ನಾಲ್ಕನೇ ಅರ್ಧಶತಕವಾಗಿತ್ತು. ಲಿಯೊನ್ (13) ಎರಡಂಕೆಯ ಸ್ಕೋರ್ ದಾಖಲಿಸಿದರು.
,,,,,,,,,,
ಸ್ಮಿತ್ ಸರಣಿಯಲ್ಲಿ ಮೂರನೇ ಶತಕ
ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಭಾರತ ವಿರುದ್ಧದ ಸರಣಿಯಲ್ಲಿ ಮೂರನೇ ಶತಕ ದಾಖಲಿಸಿದ್ದಾರೆ.
 
54ನೆ ಟೆಸ್ಟ್ ಆಡುತ್ತಿರುವ ಸ್ಮಿತ್ 20ನೇ ಟೆಸ್ಟ್ ಶತಕ ದಾಖಲಿಸಿದ್ದಾರೆ. ಸ್ಮಿತ್ 150 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ ಶತಕ ಪೂರ್ಣಗೊಳಿಸಿದರು. ಪುಣೆಯಲ್ಲಿ ಮೊದಲ ಟೆಸ್ಟ್‌ನಲ್ಲಿ 139 ಮತ್ತು 27 ರನ್ ಗಳಿಸಿ ಗೆಲುವು ತಂದು ಕೊಟ್ಟಿದ್ದ ನಾಯಕ ಸ್ಮಿತ್ ಬೆಂಗಳೂರಿನಲ್ಲಿ ಎರಡನೆ ಟೆಸ್ಟ್‌ನಲ್ಲಿ 8 ಮತ್ತು 28 ರನ್‌ಗಳ ಕೊಡುಗೆ ನೀಡಿದ್ದರು. ಅವರ ವೈಫಲ್ಯದ ಪರಿಣಾಮವಾಗಿ ಆಸ್ಟ್ರೇಲಿಯ ಸೋಲು ಅನುಭವಿಸಿತ್ತು.
 ರಾಂಚಿಯಲ್ಲಿ ಮೂರನೆ ಟೆಸ್ಟ್‌ನಲ್ಲಿ 178 ಮತ್ತು 27 ರನ್ ದಾಖಲಿಸಿದ್ದರು. ಸ್ಮಿತ್ ರಾಂಚಿಯಲ್ಲಿ 178 ರನ್ ಗಳಿಸುವ ಮೂಲಕ ಭಾರತದ ನೆಲದಲ್ಲಿ ಗರಿಷ್ಠ ರನ್ ದಾಖಲಿಸಿದ ಆಸ್ಟ್ರೇಲಿಯದ ನಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಅವರು ದ್ವಿಶತಕ ದಾಖಲಿಸುವ ಬಗ್ಗೆ ಯೋಚನೆ ಮಾಡಿದ್ದರೂ, ತಂಡದ ಸಹ ಆಟಗಾರರ ಬೆಂಬಲದ ಕೊರತೆಯಿಂದಾಗಿ ಆ ಕನಸು ಈಡೇರಲಿಲ್ಲ.
,,,,,
ಅಶ್ವಿನ್ ದಾಖಲೆ
20ನೇ ಶತಕ ದಾಖಲಿಸಿದ ನಾಯಕ ಸ್ಮಿತ್ ಅವರು ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. 173 ಎಸೆತಗಳ ಬ್ಯಾಟಿಂಗ್‌ನಲ್ಲಿ ಸ್ಮಿತ್ 14 ಬೌಂಡರಿಗಳ ಸಹಾಯದಿಂದ 111 ರನ್ ಗಳಿಸಿ ಹಂಗಾಮಿ ನಾಯಕ ರಹಾನೆಗೆ ಕ್ಯಾಚ್ ನೀಡಿದರು.
ಅಶ್ವಿನ್ ಅವರು ಸ್ಮಿತ್ ವಿಕೆಟ್ ಪಡೆಯುವುದರೊಂದಿಗೆ ಒಂದೇ ವರ್ಷ ಅತ್ಯಂತ ಹೆಚ್ಚು ವಿಕೆಟ್ ಪಡೆದ ಡೇಲ್ ಸ್ಟೇನ್ ದಾಖಲೆ ಮುರಿದರು.
ಅಶ್ವಿನ್ 2016-17ನೇ ಸಾಲಿನಲ್ಲಿ 13 ಟೆಸ್ಟ್‌ಗಳಲ್ಲಿ 79 ವಿಕೆಟ್ ಪಡೆದಿದ್ದಾರೆ.
ರಾಂಚಿಯಲ್ಲಿ ಅಶ್ವಿನ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಪಡೆಯುವುದರೊಂದಿಗೆ ಸ್ಟೇನ್ ದಾಖಲೆ ಸರಿಗಟ್ಟಿದ್ದರು. ಸ್ಟೇನ್ 2007-08ನೇ ಸಾಲಿನಲ್ಲಿ 12 ಪಂದ್ಯಗಳಲ್ಲಿ 78 ವಿಕೆಟ್ ಗಿಟ್ಟಿಸಿಕೊಂಡಿದ್ದರು.
ಬೌಲಿಂಗ್ ಆಲ್‌ರೌಂಡರ್ ಅಶ್ವಿನ್ 49 ಟೆಸ್ಟ್‌ಗಳ 69 ಇನಿಂಗ್ಸ್‌ಗಳಲ್ಲಿ ಈ ತನಕ 272 ವಿಕೆಟ್ ಗಳಿಸಿದ್ದಾರೆ.4 ಶತಕ ಮತ್ತು 10 ಅರ್ಧಶತಕ ದಾಖಲಿಸಿದ್ದಾರೆ.
,,,,,,,,,

ಕುಲದೀಪ್ ಕನಸು ನನಸಾಯಿತು
 ಯುವ ಬೌಲರ್ ಕುಲದೀಪ್ ಯಾದವ್ ಆಸ್ಟ್ರೇಲಿಯ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ 68ಕ್ಕೆ 4 ವಿಕೆಟ್ ಉಡಾಯಿಸುವ ಮೂಲಕ ಚೊಚ್ಚಲ ಟೆಸ್ಟ್‌ನಲ್ಲಿ ಅಪೂರ್ವ ಯಶಸ್ಸು ಗಳಿಸಿದ್ದಾರೆ.
   ಕುಲದೀಪ್ ಯಾದವ್ ಟೆಸ್ಟ್ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರು ಶುಕ್ರವಾರ ರಾತ್ರಿ ಸರಿಯಾಗಿ ನಿದ್ದೆ ಮಾಡಿರಲಿಲ್ಲ.
  ಕುಲದೀಪ್ ಯಾದವ್‌ಗೆ ಅವಕಾಶ ಒಲಿದು ಬಂದ ಸುದ್ದಿ ಗೊತ್ತಾಗಿ ಅವರ ಕುಟುಂಬ ಸದಸ್ಯರು ಎಲ್ಲ ಕೆಲಸಗಳನ್ನು ಬದಿಗೊತ್ತಿ ಟಿವಿ ಮುಂದೆ ಕಾಲ ಕಳೆದರು. ಆಸ್ಟ್ರೇಲಿಯ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಹಿನ್ನೆಲೆಯಲ್ಲಿ ಕುಲದೀಪ್ ಟೆಸ್ಟ್‌ನಲ್ಲಿ ಬೌಲಿಂಗ್ ನಡೆಸುವುದನ್ನು ನೋಡುವ ಅವಕಾಶ ಬೇಗನೇ ಸಿಕ್ಕಿತು. ಕುಲದೀಪ್ ತಂದೆ ರಾಮ್ ಸಿಂಗ್ ಯಾದವ್ ಅವರು ಕಚೇರಿಗೆ ಹೋಗುವ ಇಂದಿನ ಕಾರ್ಯಕ್ರಮವನ್ನು ರದ್ದು ಮಾಡಿದರು. ಟಿವಿ ಮುಂದೆ ಕುಳಿತುಕೊಂಡರು.

   ಭೋಜನ ವಿರಾಮಕ್ಕೆ ಸ್ವಲ್ಪ ಮೊದಲು ಕುಲದೀಪ್ ಯಾದವ್ ಬೌಲಿಂಗ್ ನಡೆಸುವ ಅವಕಾಶ ಪಡೆದರು. ಕುಲದೀಪ್ ಅವರ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ವಾರ್ನರ್ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ತನ್ನ ಮೊದಲ  ಓವರ್‌ನಲ್ಲಿ 5 ರನ್ ಬಿಟ್ಟು ಕೊಟ್ಟರು. ಕುಲದೀಪ್ ಅವರ ನಾಲ್ಕನೆ ಓವರ್‌ನ ಮೊದಲ ಎಸೆತದಲ್ಲಿ ವಾರ್ನರ್ ಅವರು ಹಂಗಾಮಿ ನಾಯಕ ಅಜಿಂಕ್ಯ ರಹಾನೆಗೆ ಕ್ಯಾಚ್ ನೀಡಿದರು. ಇದರೊಂದಿಗೆ ಕುಲದೀಪ್ ಯಾದವ್ ಖಾತೆಗೆ ಮೊದಲ ವಿಕೆಟ್ ಸೇರ್ಪಡೆಗೊಂಡಿತು. ಕುಲದೀಪ್ ಚೊಚ್ಚಲ ವಿಕೆಟ್ ಪಡೆಯುತ್ತಿದ್ದಂತೆ ಅವರ  ತಂದೆ ರಾಮ್ ಸಿಂಗ್ ಯಾದವ್, ತಾಯಿ ಉಷಾ ಸಿಂಗ್ ಮತ್ತು ಅವರ ಸಹೋದರಿ ಸಂತಸದ ಕಡಲಲ್ಲಿ ತೇಲಾಡಿದರು. ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ಎರಡನೆ ವಿಕೆಟ್ ಪಡೆದಾಗ ಮನೆಯಲ್ಲಿ ವಿಜಯೋತ್ಸವದ ವಾತವರಣ. ನೆರೆಮನೆಯವರು ವಿಜಯೋತ್ಸವದಲ್ಲಿ ಭಾಗಿಯಾದರು. ಮೂರನೇ ವಿಕೆಟ್ ಪಡೆಯುತ್ತಿದ್ದಂತೆ ರಾಮ ಸಿಂಗ್ ಅವರಿಗೆ ಸಂಬಂಧಿಕರಿಂದ ದೂರವಾಣಿ ಮೂಲಕ ಅಭಿನಂದನೆಯ ಮಹಾಪೂರವೇ ಹರಿದು ಬಂತು.
‘‘ಕುಲದೀಪ್ ದಿನವೂ ಸಂಜೆ ಫೋನ್ ಮಾಡಿ ಮನೆ ಸದಸ್ಯರೊಂದಿಗೆ ಮಾತನಾಡುತ್ತಾರೆ. ನಿನ್ನೆ ಸಂಜೆ ಮಾತನಾಡುವಾಗ ನಾಳೆ (ಶನಿವಾರ) ಟೆಸ್ಟ್‌ನಲ್ಲಿ ಆಡಲು ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಜನರ ಪ್ರೀತಿ ಮತ್ತು ಹಾರೈಕೆ ಸದಾ ಅವರಿಗಿದೆ. ಕುಲದೀಪ್ ಚೊಚ್ಚಲ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದ ವಿಚಾರ ಗೊತ್ತಾಗುತ್ತಿದ್ದಂತೆ ನಾನು ಕಚೇರಿಗೆ ಹೋಗುವ ನಿರ್ಧಾರದಿಂದ ಹಿಂದೆ ಸರಿದು ಮನೆಯಲ್ಲಿ ಟಿವಿ ಮುಂದೆ ಕ್ರಿಕೆಟ್ ವೀಕ್ಷಣೆಗೆ ಕುಳಿತುಕೊಂಡೆ ’’ ಎಂದು ಕುಲದೀಪ್ ಯಾದವ್ ತಂದೆ ರಾಮ್ ಸಿಂಗ್ ಹೇಳಿದರು.
  
ಉತ್ತರ ಪ್ರದೇಶದ ಕಾನ್ಪುರದ 22ರ ಹರೆಯದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಈ ವರೆಗೆ ಆಡಿರುವ 22 ಪ್ರಥಮ ದರ್ಜೆ ಪಂದ್ಯಗಳಲ್ಲಿ 81 ವಿಕೆಟ್ ಪಡೆದಿದ್ದಾರೆ. ಇನಿಂಗ್ಸ್‌ನಲ್ಲಿ 79ಕ್ಕೆ 6 ವಿಕೆಟ್ ಪಡೆದಿರುವುದು ಜೀವನಶ್ರೇಷ್ಠ ಸಾಧನೆ. 1 ಶತಕ ಮತ್ತು 5 ಅರ್ಧಶತಕಗಳನ್ನು ದಾಖಲಿಸಿದ್ದಾರೆ. 

ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 88.3 ಓವರ್‌ಗಳಲ್ಲಿ ಆಲೌಟ್ 300
    ವಾರ್ನರ್ ಸಿ ರಹಾನೆ ಬಿ ಕುಲದೀಪ್ 56
        ರೆನ್‌ಶಾ ಬಿ ಯಾದವ್ 01
        ಸ್ಮಿತ್ ಸಿ ರಹಾನೆ ಬಿ ಅಶ್ವಿನ್ 111
    ಶಾನ್ ಮಾರ್ಷ್ ಸಿ ಸಹಾ ಬಿ ಯಾದವ್04
         ಹ್ಯಾಂಡ್ಸ್‌ಕಂಬ್ ಬಿ ಕುಲದೀಪ್08
        ಮ್ಯಾಕ್ಸ್‌ವೆಲ್ ಬಿ ಕುಲದೀಪ್ 08
            ವೇಡ್ ಬಿ ಜಡೇಜ57
    ಕಮಿನ್ಸ್ ಸಿ ಆ್ಯಂಡ್ ಬಿ ಕುಲದೀಪ್21
    ಓ’ ಕೇಫೆ ರನೌಟ್(ಸಹಾ/ಅಯ್ಯರ್)08
    ಲಿಯೊನ್ ಸಿ ಪೂಜಾರ ಬಿ ಕುಮಾರ 13
        ಹೇಝಲ್‌ವುಡ್ ಔಟಾಗದೆ02
                ಇತರೆ11
ವಿಕೆಟ್ ಪತನ: 1-10, 2-144, 3-153, 4-168, 5-178, 6-208, 7-245, 8-269, 9-298, 10-300.
ಬೌಲಿಂಗ್ ವಿವರ
        ಬಿ.ಕುಮಾರ್12.3-2-41-1
    ಉಮೇಶ್ ಯಾದವ್15.0-1-69-2
            ಅಶ್ವಿನ್ 23.0-5-54-1
            ಜಡೇಜ15.0-1-57-1
    ಕುಲದೀಪ್ ಯಾದವ್23.0-3-68-4
ಭಾರತ ಮೊದಲ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 00
        ರಾಹುಲ್ ಔಟಾಗದೆ00
        ವಿಜಯ್ ಔಟಾಗದೆ00
ಬೌಲಿಂಗ್‌ವಿವರ
        ಹೇಝಲ್‌ವುಡ್1-1-0-0

ಅಂಕಿ-ಅಂಶ

02: ಸ್ಟೀವನ್ ಸ್ಮಿತ್ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 3 ಶತಕಗಳನ್ನು ಬಾರಿಸಿದ ಪ್ರವಾಸಿ ತಂಡದ ಎರಡನೆ ನಾಯಕನಾಗಿದ್ದಾರೆ. 2012-13ರಲ್ಲಿ ಇಂಗ್ಲೆಂಡ್‌ನ ಅಲಿಸ್ಟರ್ ಕುಕ್ ಈ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ನಡೆದಿರುವ ಟೆಸ್ಟ್ ಸರಣಿಯೊಂದರಲ್ಲಿ 3 ಶತಕಗಳನ್ನು ಬಾರಿಸಿರುವ ಪ್ರವಾಸಿ ತಂಡದ ಆರನೆ ಬ್ಯಾಟ್ಸ್‌ಮನ್ ಸ್ಮಿತ್.

01: ಭಾರತದಲ್ಲಿ ನಡೆದ ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸಿದ ಆಸ್ಟ್ರೇಲಿಯದ ಮೊದಲ ಬ್ಯಾಟ್ಸ್‌ಮನ್ ಸ್ಮಿತ್. 1959-60ರಲ್ಲಿ ನೀಲ್ ಹಾರ್ವೆ ಹಾಗೂ ನಾರ್ಮ್ ಒ’ನೀಲ್, 2000-01ರಲ್ಲಿ ಮ್ಯಾಥ್ಯೂಹೇಡನ್, 2004-05ರಲ್ಲಿ ಡೇಮಿಯನ್ ಮಾರ್ಟಿನ್ ತಲಾ 2 ಶತಕಗಳನ್ನು ಬಾರಿಸಿದ್ದರು.

99: ಸ್ಮಿತ್ 99ನೆ ಇನಿಂಗ್ಸ್‌ನಲ್ಲಿ 20ನೆ ಟೆಸ್ಟ್ ಶತಕ ಪೂರೈಸಿದರು. ಡಾನ್ ಬ್ರಾಡ್ಮನ್(55 ಇನಿಂಗ್ಸ್), ಸುನೀಲ್ ಗವಾಸ್ಕರ್(95) ಹಾಗೂ ಹೇಡನ್(95) ನಂತರ ಈ ಸಾಧನೆ ಮಾಡಿರುವ 4ನೆ ಬ್ಯಾಟ್ಸ್‌ಮನ್ ಸ್ಮಿತ್.

03: ಸ್ಮಿತ್ ಭಾರತ ವಿರುದ್ಧ 7ನೆ ಶತಕ ಬಾರಿಸಿದ ವಿಶ್ವದ ಮೂರನೆ ಬ್ಯಾಟ್ಸ್‌ಮನ್. ರಿಕಿ ಪಾಂಟಿಂಗ್, ವಿವಿಯನ್ ರಿಚರ್ಡ್ಸ್ ಹಾಗೂ ಗ್ಯಾರಿ ಸೋಬರ್ಸ್ ತಲಾ 8 ಶತಕಗಳನ್ನು ಬಾರಿಸಿದ್ದಾರೆ. ಸ್ಮಿತ್ 2014-15ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 4 ಶತಕಗಳನ್ನು ಸಿಡಿಸಿದ್ದರು. ಪ್ರಸ್ತುತ ಟೆಸ್ಟ್ ಸರಣಿಯಲ್ಲಿ 3 ಶತಕಗಳನ್ನು ಬಾರಿಸಿದ್ದಾರೆ.

19: ಭಾರತ ವಿರುದ್ಧ 19 ಇನಿಂಗ್ಸ್‌ಗಳಲ್ಲಿ ಸ್ಮಿತ್ 7 ಶತಕ ಬಾರಿಸಿದ್ದಾರೆ. ಎವರ್ಟನ್ ವೀಕ್ಸ್ ಭಾರತ ವಿರುದ್ಧ 14 ಇನಿಂಗ್ಸ್‌ಗಳಲ್ಲಿ 7 ಶತಕ ಬಾರಿಸಿದ್ದರು. ಸ್ಮಿತ್ ಬೇರ್ಯಾವ ತಂಡದ ವಿರುದ್ಧವೂ 5 ಕ್ಕಿಂತ ಹೆಚ್ಚು ಶತಕ ಸಿಡಿಸಿಲ್ಲ.

03: ಸ್ಮಿತ್ 2016-17ರ ಸಾಲಿನಲ್ಲಿ ಭಾರತದಲ್ಲಿ ಶತಕ ಬಾರಿಸಿದ ಪ್ರವಾಸಿ ತಂಡದ ಮೂರನೆ ನಾಯಕನಾಗಿದ್ದಾರೆ. ಅಲಿಸ್ಟರ್ ಕುಕ್ ಹಾಗೂ ಮುಶ್ಫಿಕುರ್ರಹೀಂ(ಬಾಂಗ್ಲಾದೇಶ) ತಲಾ ಒಂದು ಶತಕ ಬಾರಿಸಿದ್ದರು.

4/68: ಚೊಚ್ಚಲ ಪಂದ್ಯವನ್ನಾಡಿರುವ ಭಾರತದ ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಮೊದಲ ಇನಿಂಗ್ಸ್‌ನಲ್ಲಿ 68 ರನ್‌ಗೆ 4 ವಿಕೆಟ್ ಪಡೆದು ಗಮನ ಸೆಳೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News