ಸಹಕಾರ ಕ್ಷೇತ್ರಕ್ಕೆ ಡಿಜಿಟಲ್ ಬ್ಯಾಂಕಿಂಗ್ ಪೂರಕ: ಬಿ.ಎ.ಮಹದೇವಪ್ಪ
ಮಂಗಳೂರು, ಮಾ.25: ಸಹಕಾರ ಕ್ಷೇತ್ರದ ಮನಃಸ್ಥಿತಿ ಬದಲಾಗುತ್ತಿದ್ದು, ಈ ಕ್ಷೇತ್ರಕ್ಕೆ ಡಿಜಿಟಲ್ ಬ್ಯಾಂಕಿಂಗ್ ಪೂರಕವಾಗಲಿದೆ. ನಗದು ರಹಿತ ವ್ಯವಸ್ಥೆಗೆ ಈ ಕ್ಷೇತ್ರ ಒಗ್ಗಿಕೊಳ್ಳುತ್ತಿವೆ ಎಂದು ಶಿವಮೊಗ್ಗ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಬಿ.ಎ.ಮಹದೇವಪ್ಪ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಮಹಾಮಂಡಳ ಹಾಗೂ ಸಹಕಾರ ಸಂಘಗಳ ಸದಸ್ಯರಿಗಾಗಿ ನಗರದ ಬೋಳಾರದ ಮೀನು ಮಹಾಮಂಡಳದ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ವಿಶೇಷ ತರಬೇತಿ ಶಿಬಿರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ದೇಶದ 63 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಜಿಲ್ಲಾ ಬ್ಯಾಂಕುಗಳನ್ನು 3 ವರ್ಷಗಳಲ್ಲಿ ಸಂಪೂರ್ಣ ಗಣಕೀಕರಣಗೊಳಿಸಲು ನಬಾರ್ಡ್ ಮೂಲಕ 1,900 ಕೋಟಿ ರೂ. ಆರ್ಥಿಕ ನೆರವನ್ನು 2017-18ನೆ ಕೇಂದ್ರ ಬಜೆಟ್‌ನಲ್ಲಿ ಒದಗಿಸಲಾಗಿದೆ. ಪ್ಯಾಕ್ಸ್ ಹಾಗೂ ಮೈಕ್ರೋ ಎಟಿಎಂ ಹಾಗೂ ಸ್ವೈಪಿಂಗ್ ಮೆಷಿನ್‌ಗಳು ಬರಲಿವೆ. ಜನರು ನಗದು ರಹಿತ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದು, ಮೀನುಗಾರ ಸಹಕಾರ ಸಂಘಗಳು ಕೂಡ ಅಪ್‌ಡೇಟ್ ಆಗಬೇಕಾಗಿದೆ ಎಂದು ಮಹದೇವಪ್ಪ ನುಡಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸಹಕಾರಿ ಕ್ಷೇತ್ರ ಅವಿಭಜಿತ ದ.ಕ.ಜಿಲ್ಲೆಯ ಅಭಿವೃದ್ಧಿಗೆ ಮುನ್ನಡಿ ಬರೆದಿದೆ. ಇಲ್ಲಿ ಸಹಕಾರಿ ಸಂಘಗಳು ರಾಷ್ಠೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಅಭಿವೃದ್ಧ್ಧಿಯತ್ತ ಸಾಗುತ್ತಿವೆ ಎಂದು ಶ್ಲಾಘಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳದ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳಲ್ಲಿ ಸಹಕಾರಿ ಕ್ಷೇತ್ರಗಳಿಗೆ ಪೂರಕ ಯೋಜನೆ ಪ್ರಕಟಗೊಳ್ಳಲು ಅನುಕೂಲವಾಗುವಂತೆ ಬಜೆಟ್ ಮೊದಲು ಎಲ್ಲ ಸಹಕಾರಿ ಸಂಘಗಳ ಸಭೆ ಕರೆದು ಸರಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಯೋಜನೆ ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಎಸ್.ಎಲ್.ಭೋಜೇಗೌಡ ಮಾತನಾಡಿ, ಪ್ರಧಾನಮಂತ್ರಿಗಳ ಫಸಲು ಬಿಮಾ ಯೋಜನೆಯಲ್ಲಿ ನಿರ್ದಿಷ್ಟ ವಿಮಾ ಸಂಸ್ಥೆಯಿಂದಲೇ ವಿಮಾ ಸೌಲಭ್ಯ ಪಡೆಯಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ. ಸರಕಾರದ ಭಾಗವಾಗಿರುವ ಸಹಕಾರ ಕ್ಷೇತ್ರದ ಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಮೀನುಗಾರಿಕಾ ಉಪನಿರ್ದೇಶಕ ಮಹೇಶ್ ಕುಮಾರ್, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯದರ್ಶಿ ಪಿ.ಎಂ. ನಾಗಶಯನ, ದ.ಕ.ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್, ಮಾನವ ಸಂಪನ್ಮೂಲನಾಧಿಕಾರಿ ಎಚ್.ಕೆ. ದಿನೇಶ್ ಹಾಗೂ ಕಾನೂನು ತಜ್ಞ ಮಂಜುನಾಥ್ ಎಸ್. ಕೆ. ಮಾಹಿತಿ ನೀಡಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಕೆ. ಸ್ವಾಗತಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಯೋಜನಾ ಅಧಿಕಾರಿ ಮಂಜುನಾಥ್ ವಂದಿಸಿದರು.