×
Ad

ವೆನ್ಲಾ ಕ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣಕ್ಕೆ 15.16 ಕೋ. ರೂ.: ಸಚಿವ ರಮೇಶ್ ಕುಮಾರ್

Update: 2017-03-25 18:58 IST

ಮಂಗಳೂರು, ಮಾ. 25: ವೆನ್ಲಾ ಕ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಿಸಲು ಈಗಾಗಲೇ 15.16 ಕೋಟಿ ರೂ. ಅಂದಾಜು ವೆಚ್ಚದ ನೂತನ ಕಟ್ಟಡ ನಿರ್ಮಾಣವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ನಗರದ ವೆನ್ಲಾಕ್ ಆಸ್ಪತ್ರೆಯ ಅಭಿವೃದ್ಧಿಯ ಕುರಿತು ಸರಕಾರದ ಮುಂದಿರುವ ಯೋಜನೆಗಳ ಬಗ್ಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.

5.10 ಕೋಟಿ ರೂ. ಮೊತ್ತವನ್ನು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಪಾವತಿಸಲಾಗಿದೆ. ಇದರಲ್ಲಿ ನೂತನ ಕಟ್ಟಡದ ನೆಲಮಾಳಿಗೆ ನಿರ್ಮಾಣವು ಸಂಪೂರ್ಣವಾಗಿ ಮುಗಿದಿದ್ದು, ನಬಾರ್ಡ್ ವತಿಯಿಂದ 9.70 ಕೋ. ರೂ. ಅನುದಾನವನ್ನು ಆರ್‌ಐಡಿಎಫ್-22 ಯೋಜನೆಯಡಿಯಲ್ಲಿ ಮಂಜೂರು ಮಾಡಿ ಕೆಎಚ್‌ಎಸ್‌ಡಿಆರ್‌ಪಿ ಬೆಂಗಳೂರು ಅವರಿಗೆ ಕಾಮಗಾರಿ ಕೈಗೊಳ್ಳಲು ಬಿಡುಗೆ ಮಾಡಲಾಗಿದೆ. ಈ ಬಗ್ಗೆ ಕೆಎಚ್‌ಎಸ್‌ಡಿಆರ್‌ಪಿ ವತಿಯಿಂದ ಕಾಮಗಾರಿ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಆಸ್ಪತ್ರೆಯ ಸಮಗ್ರ ದುರಸ್ಥಿಗಾಗಿ ಕೆಎಚ್‌ಎಸ್‌ಡಿಆರ್‌ಪಿ ಮಂಗಳೂರು ಅವರು 18.2 ಕೋ. ರೂ. ಅಂದಾಜು ವೆಚ್ಚದ ಪಟ್ಟಿಯನ್ನು ಸಲ್ಲಿಸಿದ್ದು, ಅದರಂತೆ 5 ಕೋ. ರೂ. ಅನುದಾನವನ್ನು ಕೆಎಚ್‌ಎಸ್‌ಡಿಆರ್‌ಪಿಗೆ ದುರಸ್ಥಿ ನಿರ್ವಹಣೆಗಾಗಿ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು.

ಆಸ್ಪತ್ರೆಯ ಆರ್‌ಎಪಿಸಿಸಿ ವಿಭಾಗದ ಮಕ್ಕಳ ಆಸ್ಪತ್ರೆಯನ್ನು ಪ್ರಾದೇಶಿಕ ಅತ್ಯಾಧುನಿಕ ಮಕ್ಕಳ ಆರೋಗ್ಯ ಕೇಂದ್ರವನ್ನಾಗಿ ಪರಿಗಣಿಸಲು ಪ್ರಸ್ತಾವನೆಯು ಪರಿಶೀಲನೆಯಲ್ಲಿದ್ದು, ಇದಕ್ಕಾಗಿ 3 ಕೋ. ರೂ. ಅನುದಾನವನ್ನು 2017-18ನೆ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದರು.

ಆರ್‌ಎಪಿಸಿಸಿ ಮಕ್ಕಳ ವಿಭಾಗದಲ್ಲಿ ದ.ಕ. ಜಿಲ್ಲೆಯಲ್ಲದೆ, ಇನ್ನಿತರ ಸುತ್ತಮುತ್ತಲಿನ 8-10 ಜಿಲ್ಲೆಗಳಿಂದ ಹಾಗೂ ಗಡಿಭಾಗದ ಕೇರಳ ರಾಜ್ಯದಿಂದ ಬರುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಮಂಗಳೂರು ಮತ್ತು ಸುತ್ತಮುತ್ತಲಿನ ಮಕ್ಕಳಿಗೆ ಹೆಚ್ಚುವರಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು 3 ಕೋ. ರೂ. ವೆಚ್ಚದಲ್ಲಿ ಬೆಂಗಳೂರು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಾದರಿಯಲ್ಲಿ ಪ್ರಾದೇಶಿಕ ಹಾಗೂ ಉನ್ನತ ಮಕ್ಕಳಿಗೆ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲು ಯೋಜಿಸಲಾಗಿದೆ.ಇದಕ್ಕಾಗಿ 3 ಕೋ. ರೂ. ಅನುದಾನವನ್ನು 2017-18ನೆ ಸಾಲಿನ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ ಎಂದರು ಆರೋಗ್ಯ ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News