ಭಾರತೀಯ ಸೈನಿಕರು ಉತ್ತಮ ನಡತೆಯವರು : ವಿಶ್ವಸಂಸ್ಥೆ

Update: 2017-03-25 14:01 GMT

ವಿಶ್ವಸಂಸ್ಥೆ, ಮಾ. 25: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಉತ್ತಮ ತರಬೇತಿ ಪಡೆದ ಹಾಗೂ ಉತ್ತಮ ನಡತೆಯ ಸಿಪಾಯಿಗಳನ್ನು ಕಳುಹಿಸುತ್ತಿರುವುದಕ್ಕಾಗಿ ಪಡೆಯ ನಿರ್ಗಮನ ಮುಖ್ಯಸ್ಥರು ಭಾರತ ಮತ್ತು ಇತರ ದಕ್ಷಿಣ ಏಶ್ಯ ದೇಶಗಳನ್ನು ಶ್ಲಾಘಿಸಿದ್ದಾರೆ.

‘‘ಸಂಖ್ಯೆಯ ದೃಷ್ಟಿಯಿಂದ ನೋಡಿದರೆ ದಕ್ಷಿಣ ಏಶ್ಯ ದೇಶಗಳ ದೇಣಿಗೆ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಗರಿಷ್ಠ ಸಂಖ್ಯೆಯ ಸೈನಿಕರನ್ನು ಕಳುಹಿಸುವ ಮೂರು ಅಥವಾ ನಾಲ್ಕು ದೇಶಗಳ ಪೈಕಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಒಳಗೊಂಡಿರುತ್ತವೆ’’ ಎಂದು ಶಾಂತಿಪಾಲನಾ ಕಾರ್ಯಾಚರಣೆಗಳ ಅಧೀನ ಮಹಾಕಾರ್ಯದರ್ಶಿ ಹರ್ವ್ ಲ್ಯಾಡ್‌ಸೌಸ್ ಹೇಳಿದರು.

ಅವರು ಶುಕ್ರವಾರ ತನ್ನ ಹುದ್ದೆಯ ಅಂತಿಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಅವರ ಸ್ಥಾನವನ್ನು ಇನ್ನೋರ್ವ ಫ್ರೆಂಚ್ ರಾಜತಾಂತ್ರಿಕ ಜೀನ್ ಪಿಯರ್ ಲ್ಯಾಕ್ರೋಯಿಕ್ಸ್ ವಹಿಸಿಕೊಳ್ಳಲಿದ್ದಾರೆ.

ದಕ್ಷಿಣ ಏಶ್ಯದ ದೇಶಗಳು ವಿಶ್ವಸಂಸ್ಥೆಗೆ ಗರಿಷ್ಠ ಸಂಖ್ಯೆಯ ಸೈನಿಕರನ್ನು ನೀಡುವುದು ಮಾತ್ರವಲ್ಲದೆ, ‘‘ಉತ್ತಮ ವ್ಯಕ್ತಿಗಳು, ಉತ್ತಮ ತರಬೇತಿ ಪಡೆದವರು ಹಾಗೂ ಉತ್ತಮ ನೈಪುಣ್ಯ ಹೊಂದಿದವರು ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಉತ್ತಮವಾಗಿ ವರ್ತಿಸುವ’’ ಸೈನಿಕರನ್ನೂ ನೀಡುತ್ತಿವೆ’’ ಎಂದು ಲ್ಯಾಕ್ರೋಯಿಕ್ಸ್ ನುಡಿದರು.

ದಕ್ಷಿಣ ಏಶ್ಯದ ಸೈನಿಕರಿಗೆ ಸಂಬಂಧಿಸಿ ಕೆಲವೇ ಕೆಲವು ಶಿಸ್ತು ಕ್ರಮದ ಪ್ರಕರಣಗಳಿವೆ ಎಂದರು.‘‘ಈ ವಲಯದ ದೇಶಗಳ ಸೈನಿಕರು ಅತ್ಯಂತ ಸಕ್ರಿಯ ಶಾಂತಿಪಾಲಕರು ಹಾಗೂ ದುರದೃಷ್ಟವಶಾತ್ ಅವರು ಸಾವುನೋವುಗಳಿಗೆ ಬಲಿಯಾಗಿದ್ದಾರೆ. ನನ್ನ ಅವಧಿಯಲ್ಲಿ ಅವರ ಪಾತ್ರ ಮತ್ತು ದೇಣಿಗೆಯಿಂದ ನಾನು ತುಂಬಾ ಸಂತುಷ್ಟನಾಗಿದ್ದೇನೆ’’ ಎಂದರು.

ಈ ವಲಯದ 163 ಸೈನಿಕರು ಕರ್ತವ್ಯ ನಿರ್ವಹಣೆಯ ವೇಳೆ ಪ್ರಾಣ ತ್ಯಾಗ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News