ಕಲ್ಲಂಗಡಿಗೆ ಕರಗಿ... ಎಳನೀರಿಗೆ ಫಿದಾ ಆದರು ಇಲ್ಲಿನ ಜನರು...!

Update: 2017-03-25 14:06 GMT

ಗದಗ, ಮಾ.25: ಬರಗಾಲದ ಬವಣೆಯನ್ನು ಹೊತ್ತುಕೊಂಡು ಸಾಗುತ್ತಿರುವ ಜಿಲ್ಲೆಯ ಜನರಿಗೆ ಬೇಸಿಗೆಯ ಬಿಸಿಲು ಗಾಯದ ಮೇಲೆ ಬರೆ ಎಳೆದಂತಾಗಿದೆ. ದುಡಿಯಲು ಹೊರಗೆ ಹೋಗಬೇಕೆಂದರೆ ತಲೆ ಸುತ್ತಿ ಬರುವ ಬಿಸಿಲು, ಮನೆಯಲ್ಲಿ ಕುಳಿತರೆ ಹೊಟ್ಟೆ ತುಂಬುವ ಚಿಂತೆ ಇವುಗಳ ಮಧ್ಯ ಬದುಕಲು ಹರಸಾಹಸ ಪಡುತ್ತಿರುವ ವ್ಯಾಪಾರಸ್ಥರು, ಕಾರ್ಮಿಕರು, ರೈತರು ನೋಡಿದರೆ ಜೀವ ಹಿಂಡಿದಂತಾಗುತ್ತದೆ.

 ಪ್ರತಿ ದಿನ ಬೆಳಗ್ಗೆಯಿಂದಲೇ ಆರಂಭವಾಗುವ ರಣ ಬಿಸಿಲಿನಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಮನೆಯಿಂದ ಹೊರಬೀಳುವ ಜನರಿಗೆ ಎರಡು ಮೂರು ಗಂಟೆ ಕಳೆಯುವಷ್ಟರಲ್ಲಿ ಸಾಕು ಸಾಕಾಗಿ ಬಿಡುತ್ತದೆ. ಮೊದಲು ಕುಡಿಯುವ ನೀರಿನಿಂದ ಕಂಗೆಟ್ಟಿರುವ ಅವಳಿ ನಗರದಲ್ಲಿ ನೀರನ್ನು ಕುಡಿಯಬೇಕೆಂದರೆ ಯಾವುದಾದರೂ ಹೋಟೆಲ್‌ಗೆ ಮೊರೆ ಹೋಗುವುದು ಅನಿವಾರ್ಯ. ಆದರೆ ಬಿಸಿಲಿನಲ್ಲಿ ಏನು ತಿನ್ನುವುದು ಆರೋಗ್ಯಕ್ಕೆ ಎನು ಉತ್ತಮ ಎನ್ನುವ ಸಮಯದಲ್ಲಿ ಅದಕ್ಕೆ ಪರ್ಯಾಯ ಪರಿಹಾರವೆಂಬಂತೆ ಅವಳಿ ನಗರದಲ್ಲಿ ನೀರಿನ ದಾಹ ತಣಿಸಲು ಅಲ್ಲಲ್ಲಿ ಕಣ್ಣಿಗೆ ಕಾಣುವು ಕಲ್ಲಂಗಡಿ ಮತ್ತು ಎಳೆನೀರು ಮಾರಾಟ ಮಾಡುವ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

 ಕಲ್ಲಂಗಡಿಗೆ ಕರುಗಿದ ಜಿಲ್ಲೆಯ ಜನ..!

ನೀರಿಗಾಗಿ ಪರಿತಪಿಸುತ್ತಿರುವವರಿಗೆ ರಸ್ತೆಯಲ್ಲಿ ಕಣ್ಣಿಗೆ ಮೊದಲು ಕಂಡು ಬರುವುದು ಕಲ್ಲಂಗಡಿ. ಹಾಗಾಗಿ ಅದಕ್ಕೆ ಮನಸ್ಸು ಸೋಲದೆ ಇರದು. ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಕಲ್ಲಂಗಡಿಗಳಿಗೆ ಸದ್ಯ ಎಲ್ಲಿಲ್ಲದ ಬೇಡಿಕೆ ಬಂದಿದೆ. ಗಾತ್ರ, ಬಣ್ಣ ಹಾಗೂ ರುಚಿಗೆ ತಕ್ಕಂತೆ ತಲಾ 60 ರಿಂದ 150 ರೂಗಳ ವರೆಗೆ ಮಾಲಕರು ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ವ್ಯಾಪಾರ ಸಹ ಕಂಡು ಕಂಡುಕೊಂಡಿದ್ದಾರೆ.

ಎಳೆ ನೀರಿಗೂ ಫಿದಾ..!

ಬೇಸಿಗೆಯಲ್ಲಿ ಅಮೃತ ಅಂತಲೇ ಕರೆಸಿಕೊಳ್ಳುವ ಎಳೆನೀರನ್ನು ಜನ ಹೆಚ್ಚು ಇಷ್ಟ ಪಡುವುದು ಸಹಜ. ಆ ಕಾರಣದಿಂದಲೇ ನಗರದ ತುಂಬಾ ಎಳೆನೀರಿಗೂ ಜನ ಮೊರೆ ಹೊಗಿದ್ದಾರೆ. ಇತ್ತ ವ್ಯಾಪಾರ ಸಹ ಜೋರಾಗಿಯೇ ನಡೆಯುತ್ತಿದೆ. ಗಾತ್ರ ಎಷ್ಟೆ ಇರಲಿ ಪ್ರತಿಯೊಂದಕ್ಕೂ 20 ರೂ. ಮಾರಾಟಗಾರರು ನಿಗದಿ ಪಡೆಸಿರುವದರಿಂದ ಅದೃಷ್ಟ ಇದ್ದರೆ ಮಾತ್ರ ಟೆಂಗಿನಕಾಯಿಯಲ್ಲಿ ಹೆಚ್ಚು ಎಳೆ ನೀರು ದೊರಕಬಹುದು. ಇಲ್ಲದಿದ್ದರೆ ಜೇಬಿಗೂ ಕತ್ತರಿ ಮನಸ್ಸಿಗೂ ಬೇಜಾರು.

ಒಟ್ಟಾರೆ ಈ ಬಾರಿಯ ಬೇಸಿಗೆ ಬಿಸಿಲಿನ ತಾಪವನ್ನು ತಡೆಯಲು ಜನರು ಸಾಕಷ್ಟು ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಅವರವರ ಯೋಗ್ಯತೆ ಆದಾಯಕ್ಕನುಗುಣವಾಗಿ ಈ ಬೇಸಿಗೆಯ ಜೀವನ ಶೈಲಿಯನ್ನು ಕಳೆಯುತ್ತಿದ್ದಾರೆ.

Writer - ಫಾರುಕ್ ಮಕಾನದಾರ

contributor

Editor - ಫಾರುಕ್ ಮಕಾನದಾರ

contributor

Similar News