×
Ad

ಮಂಗಳೂರು: ಸರಕಾರಿ ಶಾಲೆಗಳ ಬಲವರ್ಧನೆಗೆ ಒತ್ತಾಯಿಸಿ ಸಮಾಲೋಚನಾ ಸಭೆ

Update: 2017-03-25 19:53 IST

ಮಂಗಳೂರು, ಮಾ. 25: ಸರಕಾರಿ ಪ್ರಾಥಮಿಕ ಶಾಲೆಗಳನ್ನು ಕಡೆಗಣಿಸಿ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನವು ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯುವ ಹಕ್ಕಿನ ಉಲ್ಲಂಘನೆಯಾಗಿ ನಡೆಯುತ್ತಿರುವುದು ಹಾಗೂ ಈ ಕಾಯಿದೆಯ ಹೆಸರಿನಲ್ಲಿ ಖಾಸಗಿ ಶಾಲೆಗಳ ಬಲವರ್ಧನೆಯ ಧೋರಣೆಗಳನ್ನು ಖಂಡಿಸಲು ಮತ್ತು ಸರಕಾರಿ ಶಾಲೆಗಳ ಬಲವರ್ಧನೆಗೆ ಸರಕಾರವನ್ನು ಒತ್ತಾಯಿಸಲು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ದ.ಕ. ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮತ್ತು ಶ್ಯೆಕ್ಷಣಿಕವಾಗಿ ಕಾರ್ನಿರ್ವಸುತ್ತಿರುವ ವಿವಿಧ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನಾ ಸಭೆಯು ಶನಿವಾರ ಪಡಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

 ಈ ಸಭೆಯಲ್ಲಿ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಶೇ. 25 ಮೀಸಲಾತಿಯಡಿಯಲ್ಲಿ ಮಕ್ಕಳನ್ನು ನೋಂದಾಯಿಸಿದ ಖಾಸಗಿ ಶಾಲೆಗಳಿಗೆ ರಾಜ್ಯ ಸರಕಾರ 500 ಕೋಟಿಗಿಂತಲೂ ಹೆಚ್ಚು ಅನುದಾನವನ್ನು ನಿಗದಿ ಪಡಿಸಿರುವ ಬಗ್ಗೆ, ಕಾಯಿದೆ ಪ್ರಕಾರ 6 ರಿಂದ 8ನೆ ತರಗತಿಗಳಿಗೆ ವಿಷಯವಾರು ಶಿಕ್ಷಕರನ್ನು ನೀಡದೆ ಕಾಯಿದೆಯ ಅಧ್ಯಾಯ 5ರ ಸೆಕ್ಷನ್ 29ನ್ನು ತೀರಾ ನಿರ್ಲಕ್ಷಿಸಿದ ಬಗ್ಗೆ, ಖಾಸಗಿ ಶಾಲೆಗಳಲ್ಲಿ ತರಬೇತಿ ಹೊಂದದ ಶಿಕ್ಷಕರ ಸೇವೆಯನ್ನು ಶಿಕ್ಷಕ ಶಿಕ್ಷಣ ತರಬೇತಿಯನ್ನು ಪಡೆಯಲು ಸಮಯಾವಕಾಶವನ್ನು ಇನ್ನೂ 2 ವರ್ಷಮುಂದುವರಿಸಿರುವ ಸರಕಾರದ ನಿರ್ಧಾರವನ್ನು ವಿರೋಧಿಸಲಾಯಿತು.

ಶಾಲಾ ಆಡಳಿತ ಮಂಡಳಿಗೆ ಕ್ಲಪ್ತ ಸಮಯದಲ್ಲಿ ಯವುದೇ ತರಬೇತಿಗಳನ್ನು ನೀಡದೆ ಸಮುದಾಯದ ಸಮರ್ಪಕ ಬಳಕೆಯನ್ನು ಶಾಲಾಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಅಡೆತಡೆಯಾಗಿರುವ ಬಗ್ಗೆ ಹಾಗೂ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರತಿ ವರ್ಷ 50,000 ದಿಂದ 1 ಲಕ್ಷದವರೆಗೆ ಶಾಲಾನುದನವನ್ನು ಹೆಚ್ಚಿಸಿ ಸರಕಾರಿ ಶಾಲೆಗಳನ್ನು ಮಗುಸ್ನೇಹಿಯಾಗಿ ಪರಿವರ್ತಿಸುವ ಕುರಿತು ಸಹಿತ ಹಲವು ಚಾರಗಳಲ್ಲಿ ಚರ್ಚೆಗಳು ನಡೆದವು.

ಸರಕಾರಿ ಶಾಲೆಗಳಲ್ಲಿನ ತಾರತಮ್ಯಗಳನ್ನು ನಿವಾರಿಸಿ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಸಮಾನ ಶಾಲಾ ಶಿಕ್ಷಣವನ್ನು ಪಡೆಯುವಲ್ಲಿ ಸರಕಾರವು ಅತಿ ತುರ್ತಾಗಿ ಪ್ರತಿ ಶಾಲೆಗಳಿಗೂ ತರಗತಿಗೊಂದು ಶಿಕ್ಷಕರನ್ನು ನೇಮಕ ಮಾಡುವುದು, 6 ರಿಂದ 8 ನೆ ತರಗತಿ ವರೆಗೆ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಆರ್.ಟಿ.ಇ ಕಾಯಿದೆ ಪ್ರಕಾರ ವಿಷಯವಾರು ಶಿಕ್ಷಕರ ನೆಮಕ ಮಾಡುವಲ್ಲಿ ಸರಕಾರವನ್ನು ಒತ್ತಾಯಿಸುವುದಾಗಿ ತೀರ್ಮಾನಿಸಲಾಯಿತು.

ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಗ್ರಾಮ ಮಟ್ಟದಿಂದ ಜಿಲ್ಲೆಯ ವಿವಿಧ ವಿಧಾನ ಸಭಾ ಮತ್ತು ಲೋಕ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಿ ಎಪ್ರಿಲ್ 29ರಂದು ಈ ಆಂದೋಲನಕ್ಕೆ ಚಾಲನೆ ನೀಡಿ ಜಿಲ್ಲೆಯ ಗ್ರಾಮ ಪಂಚಾಯತ್ ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆಯ ಮೂಲಕ ಗ್ರಾಮ ಮಟ್ಟದಿಂದಲೇ ಆಂದೋಲನ ಕ್ಯೆಗೊಳ್ಳಲು ತೀರ್ಮಾನಿಸಲಾಯಿತು.

ಈ ಬೇಡಿಕೆಗಳನ್ನು ಸರಕಾರವು ಈಡೇರಿಸದಿದ್ದಲ್ಲಿ ಬೇಡಿಕೆ ಈಡೇರಿಸುವ ತನಕ ರಾಜ್ಯ ಮಟ್ಟದ ಸಮನ್ವಯ ವೇದಿಕೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮುಂದುವರಿಸುವುದಾಗಿ ಸಭೆಯಲ್ಲಿ ನಿರ್ಣಯ ಕ್ಯೆಗೊಳ್ಳಲಾಯಿತು.

  ಈ ಪ್ರಕ್ರಿಯೆಯನ್ನು ಗ್ರಾಮ ಮಟ್ಟದಿಂದ ಬಲಿಷ್ಟಗೊಳಿಸಲು ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಮಾಲೋಚನಾ ಸಭೆ ನಡೆಸಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಾರ್ಯಗಳಿಗೆ ಯೋಜನೆ ರೂಪಿಸಲು ನಿರ್ಧರಿಸಲಾಯಿತು.

 ಅದರಂತೆ ಏಪ್ರಿಲ್ 1 ರಂದು ಬಂಟ್ವಾಳ , 3 ರಂದು ಬೆಳತಿಂಗಡಿ, 4 ರಂದು ಸುಳ್ಯ, 6 ರಂದು ಪುತತಿಊರು ಹಾಗು 19ರಂದು ಮಂಗಳುರು ತಾಲೂಕುಗಳಲ್ಲಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರಗಳು , ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಹಾಗೂ ಶಿಕ್ಷಣಾಸಕ್ತರ ಸಮಲೋಚನಾ ಸಭೆಗಳನ್ನು ನಡೆಸಲು ನಿರ್ಧರಿಸಲಾಯಿತು.

  ಈ ಕಾರ್ಯಾಗಾರದಲ್ಲಿ ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜಾ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ್ ರಾವ್, ಮಾಜಿ ಅಧ್ಯಕ್ಷ ಎಸ್.ಎಂ.ಅಬೂಬಕರ್, ಎಸ್.ಡಿ.ಎಂ.ಸಿ ಜಿಲ್ಲಾಧ್ಯಕ್ಷ ಇಸ್ಮಾಯೀಲ್, ಕಾರ್ಯಾಗಾರ ನಡೆಸಿಕೊಟ್ಟರು. ದುರ್ಗಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ತಾಲೂಕು ಅಧ್ಯಕ್ಷರು, ಸದಸ್ಯರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಅಧ್ಯಕ್ಷರು , ಸದಸ್ಯರು, ಶಿಕ್ಷಣಾಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News