ಉಡುಪಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಜಿಮ್: ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ, ಮಾ.25: ಉಡುಪಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಉಪಕರಣಗಳಿಂದ ಕೂಡಿದ ಸುಸಜ್ಜಿತ ಜಿಮ್‌ನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಶನಿವಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ತೆಂಕನಿಡಿಯೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದ 4 ಕಡೆಗಳಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಅಂತಾರಾಷ್ಟ್ರೀಯ ಜಿಮ್ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಈ ಜಿಮ್‌ನಲ್ಲಿ ಅಮೇರಿಕಾದಲ್ಲಿ ಉಪಯೋಗಿಸುತ್ತಿರುವ ರೀತಿಯ ಅತ್ಯಾಧುನಿಕ ಉಪಕರಣ ಗಳನ್ನು ಅಳವಡಿಸಿ ಯುವ ಜನತೆಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌಲಭ್ಯ ಒದಗಿಸಲಾಗುವುದು ಎಂದು ಪ್ರಮೋದ್ ತಿಳಿಸಿದರು.
ಈ ಬಾರಿಯ ಬಜೆಟ್‌ನಲ್ಲಿ ಯುವ ಜನತೆಗಾಗಿ, ಯುವ ಚೈತನ್ಯ ಮತ್ತು ಯುವಶಕ್ತಿ ಸ್ವಸಹಾಯ ಸಂಘ ಎಂಬ 2 ಹೊಸ ಯೋಜನೆಗಳನ್ನು ಘೋಷಿ ಸಲಾಗಿದೆ. ಯುವ ಚೈತನ್ಯ ಯೋಜನೆಯಲ್ಲಿ 20 ಕೋಟಿ ರೂ. ಹಣ ಮೀಸಲಿ ಟ್ಟಿದ್ದು, ರಾಜ್ಯದ ಎಲ್ಲಾ ಗ್ರಾಮೀಣ ಯುವಕ ಸಂಘಗಳಿಗೆ 1 ಲಕ್ಷ ರೂ ವೌಲ್ಯದ ಕ್ರೀಡೋಪಕರಣಗಳನ್ನು ವಿತರಿಸಲಾಗುವುದು. ಯುವ ಶಕ್ತಿ ಸ್ವ ಸಹಾಯ ಸಂಘ ಯೋಜನೆಯಲ್ಲಿ 5 ಕೋಟಿ ರೂ. ಹಣ ಮೀಸಲಿಟ್ಟಿದ್ದು, ಮಹಿಳಾ ಸ್ವ ಸಹಾಯ ಸಂಘಗಳ ರೀತಿಯಲ್ಲಿ ಯುವಕ ಸಂಘಗಳ ಬೆಳವಣಿಗೆಗೆ ವಿನಿಯೋಗಿಸ ಲಾಗುವುದು ಎಂದರು.
ಕಳೆದ ಬಾರಿಯ ಬಜೆಟ್‌ನಲ್ಲಿ ಕ್ರೀಡಾ ಇಲಾಖೆಗೆ 140 ಕೋಟಿ ನೀಡಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಕ್ರೀಡಾ ಇಲಾಖೆಗೆ 285 ಕೋಟಿ ರೂ ನೀಡಿದ್ದಾರೆ. ಅಂದರೆ ಕಳೆದ ಬಾರಿಗಿಂತ ಸರಿ ಸುಮಾರು ಎರಡಷ್ಟು ಅನುದಾನ ನೀಡಿದ್ದಾರೆ. ಕ್ರೀಡಾ ಇಲಾಖೆಗೆ ಮೀಸಲಿಟ್ಟಿರುವ ಬಜೆಟ್ ಮೊತ್ತದಲ್ಲಿ ಕಾರ್ಯಕ್ರಮಗಳನ್ನು ಎ.1ರಿಂದಲೇ ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬಜೆಟ್‌ನಲ್ಲಿ ಉಡುಪಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಮಹಿಳಾ ಕ್ರೀಡಾ ಹಾಸ್ಟೆಲ್ ನಿರ್ಮಾಣ ಹಾಗೂ ಈಜುಕೊಳಕ್ಕೆ ಒಂದು ಕೋಟಿ ರೂ. ನೀಡಲಾಗಿದೆ. ಬ್ರಹ್ಮಾವರ ತಾಲೂಕು ಆಗಿರುವ ಕಾರಣ ನೇಜಾರಿನಲ್ಲಿರುವ ಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣವನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಅನುದಾನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವಕ ಸಂಘಗಳಿಗೆ ಕ್ರೀಡಾ ಸಲಕರಣೆ ಹಾಗೂ ಚೆಕ್ ಗಳನ್ನು ಸಚಿವರು ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ನೆಹರು ಯುವ ಕೇಂದ್ರದ ಸಂಯೋಜಕಿ ಜೆಸಿಂತಾ ಡಿಸೋಜ, ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಹೆಗ್ಡೆ, ಉದ್ಯಮಿ ಪ್ರಖ್ಯಾತ ಶೆಟ್ಟಿ ಉಪಸ್ಥಿತರಿದ್ದರು.
ತೆಂಕನಿಡಿಯೂರು ಕಾಲೇಜಿನ ಉಪನ್ಯಾಸಕ ಪ್ರೊ. ಪ್ರಸಾದ್ ರಾವ್ ಸ್ವಾಗತಿ, ದುಗ್ಗಪ್ಪಕಜೆಕಾರು ನಿರೂಪಿಸಿದರು.