×
Ad

ಕೋಣ ತಿವಿದು ವ್ಯಕ್ತಿ ಸಾವು; ತಿವಿದಿದ್ದು ಕಾಡುಕೋಣ ಎಂಬ ವದಂತಿ

Update: 2017-03-25 21:59 IST

ಬೆಳ್ತಂಗಡಿ, ಮಾ.25: ನಡ ಗ್ರಾಮದ ಮಂಜೊಟ್ಟಿ ಸಮೀಪ ಪೆರ್ಮಾನು ಬಸದಿ ರಸ್ತೆಯ ಬಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೋಣವೊಂದು ತಿವಿದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.

ಮೃತಪಟ್ಟವರು ಬೆಳ್ತಂಗಡಿ ನಗರ ವ್ಯಾಪ್ತಿಯ ಡೊಂಬಯ್ಯ ಪೂಜಾರಿ (53) ಎಂಬವರಾಗಿದ್ದಾರೆ. ಇವರು ಕೂಲಿ ಕೆಲಸಕ್ಕೆಂದು ಅನಿಲ್ ಎಂಬವರ ಮಾಲಕತ್ವದ ತೋಟಕ್ಕೆ ಹೋಗುತ್ತಿದ್ದು ಶನಿವಾರ ಸಂಜೆ ಹುಲ್ಲು ತೆಗೆದುಯುತ್ತಿದ್ದ ವೇಳೆ ಹಿಂದಿನಿಂದ ಬಂದ ಕೋಣವೊಂದು ಕೊಂಬಿನಿಂದ ತಿವಿದಿದ್ದು ತಿವಿದ ಭರಸಕ್ಕೆ ಬೆನ್ನಿನಿಂದ ಬಂದ ಕೊಂಬು ಎದೆಯನ್ನು ಸೀಳಿದ್ದು ತಕ್ಷಣ ಸ್ಥಳಿಯರ ಸಹಕಾರದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಮೃತಶರೀರವನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕಾಡು ಕೋಣ ವದಂತಿ:

ಕೆಲಸ ಮಾಡುತ್ತಿದ್ದ ಮನೆ ಮಾಲಕ ಒಂಟಿ ಕೋಣವನ್ನು ಸಾಕುತ್ತಿದ್ದು, ಇದನ್ನು ಹಗ್ಗವೊಂದರಿಂದ ಕಟ್ಟಿ ಹಾಕಿದ್ದು ಅದೇ ವೇಳೆ ಹಗ್ಗವನ್ನು ತುಂಡರಿಸಿ ಈತನ ಮೇಲೆ ದಾಳಿ ನಡೆಸಿದೆ. ಇದನ್ನು ಭೂಮಾಲಿಕ ತಪ್ಪಿಸುವ ಸಲುವಾಗಿ ಕಾಡುಕೋಣ ಬಂದು ತಿವಿದಿದ್ದು ಇದರಿಂದ ಸಾವನ್ನಪ್ಪಿದ್ದಾನೆ ಎಂದು ವದಂತಿ ಹಬ್ಬಿಸಿದ್ದಾನೆ ಎನ್ನಲಾಗಿದೆ.

ಇದೇ ವೇಳೆ ಸ್ಥಳಿಯರ ಮಾಹಿತಿ ಮೆರೆಗೆ ಅಂಬುಲೆನ್ಸ್ ಚಾಲಕ ಸ್ಥಳಕ್ಕೆ ದಾಳಿಗೊಳಗಾದ ಡೊಂಬಯ್ಯ ಪೂಜಾರಿಯವರನ್ನು ರಕ್ಷಿಸಲು ಸ್ಥಳಕ್ಕಾಗಮಿಸಿದ್ದು ಅದೇ ಸಂದರ್ಭ ಸಾಕು ಕೋಣವನ್ನು ಹಗ್ಗದೊಂದಿಗೆ ನಿಂತಿದ್ದನ್ನು ಕಂಡಿದ್ದಾರೆ. ಇದರಿಂದ ಸ್ಥಳಿಯರು ಸಂಶಯಕ್ಕೊಳಗಾಗಿದ್ದು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅರಣ್ಯ ಇಲಾಖೆ ಭೇಟಿ:

ಸ್ಥಳದಲ್ಲಿ ಸಿಕ್ಕಿರುವ ಕೋಣದ ಪೋಟೊ ಹಾಗೂ ಮೃತ ಶರೀರದ ಗಾಯವನ್ನು ಅಧಿಕಾರಿಗಳು ಪರಿಶೀಲಿಸಿ ಇದು ಕಾಡು ಕೋಣ ಅಲ್ಲ ಇದರ ಮೇಲೆ ಸಂಶಯವಿದೆ. ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಹಾಗೂ ಮೃತ ದೇಹದ ಮರಣೋತ್ತರ ಪರೀಕ್ಷೆಯಿಂದ ಕಾಡು ಕೋಣವೇ ಅಥವಾ ಸಾಕಿದ ಕೋಣದಿಂದ ಅನಾಹುತ ಸಂಭವಿಸಿದೆಯೇ ಎಂದು ತಿಳಿಯಬೇಕಾಗಿದೆ ಎಂದು ಅರಣ್ಯ ಅಧಿಕಾರಿಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಬಳಿ ಸೇರಿದ ಜನಸ್ತೋಮಕ್ಕೆ ಮಾಹಿತಿ ನೀಡುತ್ತಿದ್ದರು.

ತನಿಖೆಗೆ ಆಗ್ರಹ ಮೃತರ ಕುಟುಂಬವು ಇದೊಂದು ಬೇಜವಾಬ್ದಾರಿಯಿಂದ ನಡೆದ ಘಟನೆ ದಷ್ಟಪುಷ್ಟವಾದ ಕೋಣವನ್ನು ಈ ಭೂಮಾಲಕ ಸಾಕುತ್ತಿದ್ದು ಇದನ್ನು ಸಾಮಾನ್ಯ ಹಗ್ಗದಿಂದ ಕಟ್ಟಿಹಾಕಿದ್ದಾರೆ. ಇದರಿಂದಾಗಿ ಹಸಿವಿನಿಂದ ಅಥವಾ ಸಿಟ್ಟಿನಿಂದ ಹಗ್ಗವನ್ನು ತುಂಡರಿಸಿ ದಾಳಿ ನಡೆಸಿದ್ದು ಇದರಿಂದಾಗಿ ಸಾವು ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಬೆಳ್ತಂಗಡಿ ಶವಗಾರದ ಬಳಿ ಕುಟುಂಬಸ್ಥರು ಆಗ್ರಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News