ಸಮಾಜದಲ್ಲಿ ದಾಳಿಕೋರರೇ ದಾಳಿಗೊಳಗಾಗುತ್ತಿದ್ದಾರೆ: ಜಿ.ರಾಜಶೇಖರ್
ಉಡುಪಿ, ಮಾ.25: ದಾಳಿ ಮಾಡುವ ಪ್ರತಿಯೊಬ್ಬರು ಕೂಡ ದಾಳಿಗೆ ಒಳಗಾಗುತ್ತಿದ್ದಾರೆ. ಇದು ನಮ್ಮ ಸಮಾಜದ ಹಿಂಸೆಯ ಸ್ವರೂಪ. ಹಿಂಸೆಗೆ ಒಳಗಾಗುವವರು ಬಡವರು, ಶೋಷಿತರು, ತುಳಿತಕ್ಕೊಳಗಾದವರಾಗಿದ್ದರೆ, ಹಿಂಸೆ ಮಾಡುವವರು ಕೂಡ ಅದೇ ವರ್ಗಕ್ಕೆ ಸೇರಿದವರಾಗಿರುತ್ತಾರೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಹೇಳಿದ್ದಾರೆ.
ಉಡುಪಿ ಚಿತ್ರ ಸಮಾಜ ಹಾಗೂ ರಥಬೀದಿ ಗೆಳೆಯರು ಸಹಯೋಗದಲ್ಲಿ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ಆಡಿಯೋ ವಿಜುವಲ್ ಹಾಲ್ ನಲ್ಲಿ ಸಾಹಿತಿ ವೈದೇಹಿಯವರ ಕಥೆಯನ್ನು ಆಧಾರಿಸಿ ಮೇದಿನಿ ಕೆಳಮನೆ ನಿರ್ದೇಶಿಸಿದ ಕಿರು ಚಿತ್ರ 'ದಾಳಿ' ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.
ಈ ಸಿನೆಮಾವು ಸಮಾಜದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಹಿಂಸೆಯ ಸೂಚಕವಾಗಿ ಕಾಣುತ್ತದೆ. ಇಂದು ಸಮಾಜದಲ್ಲಿ ದೈಹಿಕ, ಮಾನಸಿಕ, ಮಹಿಳೆಯ ಶೀಲ, ಸ್ವಾಯತ್ತತೆಯ ಮೇಲೆ ದಾಳಿಗಳು ಧರ್ಮ, ದೇವರು, ರಾಜಕೀಯದ ಹೆಸರಿನಲ್ಲಿ ನಡೆಯುತ್ತಲೆ ಇವೆ. ಈ ಸಿನೆಮಾದ ಮೂಲಕ ನಾವು ಇಂದು ಈ ಸಮಾಜದಲ್ಲಿ ಎಷ್ಟು ಆತಂಕದಲ್ಲಿ ಬದುಕುತ್ತಿದ್ದೇವೆ ಎಂಬು ದನ್ನು ತೋರಿಸಲಾಗಿದೆ ಎಂದರು.
ಚಿತ್ರ ಸಮಾಜದ ಪ್ರೊ.ಫಣಿರಾಜ್ ಮಾತನಾಡಿ, ಒಂದು ಸಿನೆಮಾದಲ್ಲಿ ದೃಶ್ಯ ಮತ್ತು ಧ್ವನಿ ಮುಖ್ಯವಾಗಿರುತ್ತದೆ. ಅದೇ ಸಿನೆಮಾದ ನಿಜವಾದ ಭಾಷೆ. ಇದರಿಂದ ಉತ್ತಮ ಸಿನೆಮಾ ಮೂಡಿಬರಲು ಸಾಧ್ಯವಾಗುತ್ತದೆ. ಅದು ಈ ಕಿರು ಚಿತ್ರದಲ್ಲಿ ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದರು.
ವೈದೇಹಿ ಮಾತನಾಡಿ, ಕಾದಂಬರಿಯನ್ನು ಸಿನೆಮಾ ರೂಪಕ್ಕೆ ತರುವುದು ತುಂಬಾ ಕಷ್ಟ. ಆದರೂ ಮೇದಿನಿ ತುಂಬಾ ಶ್ರಮ ವಹಿಸಿ ರಚಿಸಿರುವ ಕಿರು ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರದ ಅರ್ಥ ಮೌನವೇ ದಾಳಿಯಾಗಿರುತ್ತದೆ ಎಂಬುದು. ಪ್ರೇಕ್ಷಕರು ಇದನ್ನು ತಮಗೆ ಬೇಕಾದ ರೀತಿ ಯಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಿರುಚಿತ್ರದ ನಿರ್ದೇಶಕಿ ಮೇದಿನಿ ಕೆಳಮನೆ, ನಟಿ ಮಧುನಿಶಾ, ಗಣೇಶ್ ಕೆಳಮನೆ ಉಪಸ್ಥಿತರಿದ್ದರು.