ಮಣ್ಣಪಳ್ಳ ಅಭಿವೃದ್ದಿ ಸಮಿತಿ ಸಭೆ
ಉಡುಪಿ, ಮಾ.25: ಮಣಿಪಾಲದ ಮಣ್ಣಪಳ್ಳವನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದ್ದು, ಇನ್ನಷ್ಟು ಅಭಿವೃದ್ಧಿ ಪಡಿಸಿ ಮಣ್ಣಪಳ್ಳವನ್ನು ಆಕರ್ಷಣೀಯ ಪ್ರವಾಸಿ ಕೇಂದ್ರವನ್ನಾಗಿಸಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಭಿವೃದ್ದಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಲ್ಪೆ ಮಾದರಿಯಂತೆ ಇಲ್ಲೂ ಅಭಿವೃದ್ಧಿಯಾಗಬೇಕು. ಪ್ರವಾಸೋದ್ಯಮ ಕೇಂದ್ರವಾಗಬೇಕೆಂದು ಸಚಿವರು ತಿಳಿಸಿದರು.
ಮಣ್ಣಪಳ್ಳದ ನಿರ್ವಹಣೆಗೆ ವಾರ್ಷಿಕ 15 ಲಕ್ಷ ರೂ. ಬೇಕಿದ್ದು, ಈ ನಿಟ್ಟಿನಲ್ಲಿ ಆದಾಯ ಮೂಲ ಹೆಚ್ಚಿಸಲು 'ಐಡಿಯಾ' ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಕೆರೆಯ ಆವರಣದ ಸುತ್ತಮುತ್ತಲಿನ ಹುಲ್ಲನ್ನು ಕಟಾವು ಮಾಡುವ ಬಗ್ಗೆ, ಮರಗಿಡಗಳನ್ನು ಸಂರಕ್ಷಿಸುವ ಬಗ್ಗೆ ಹಾಗೂ ಕೆರೆ ಆವರಣದಲ್ಲಿ ಕೈಗೊಳ್ಳ ಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲಿಸಲು ಉಪಸಮಿತಿ ಯೊಂದನ್ನು ರಚಿಸಲು ಸಚಿವರು ನಿರ್ದೇಶನ ನೀಡಿದರು.
ಇಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಡೀಮ್ಡ್ ಅರಣ್ಯವಿರುವುದರಿಂದ ಅಭಿವೃದ್ಧಿಯ ರೂಪುರೇಷೆಗಳನ್ನು ಉಪಅರಣ್ಯ ಸಂರಕ್ಷಣಾಧಿಕಾರಿ ಗಳ ಜೊತೆಗೂಡಿ ತಯಾರಿಸಲು ಸಚಿವರು ತಿಳಿಸಿದರು.
ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಸೇರಿದ ಕೆರೆ ಆವರಣದ ಜಾಗದಲ್ಲಿ ಒಳಾಂಗಣ ಕ್ರೀಡೆ ಮತ್ತು ಮಕ್ಕಳ ಪಾರ್ಕ್ ನಿರ್ಮಿಸುವ ಬಗ್ಗೆಯೂ ಚರ್ಚಿಸಲಾಯಿತು. ಮಣ್ಣಪಳ್ಳ ಅಭಿವೃದ್ಧಿ ಬಗ್ಗೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿ ತಮಗೆ ಸಲ್ಲಿಸಬೇಕೆಂದು ಸಚಿವರು ಈ ಸಂದರ್ದಲ್ಲಿ ಹೇಳಿದರು.
ಪ್ರವೇಶ ಶುಲ್ಕ:
ಅಲ್ಲದೆ ಮಣ್ಣಪಳ್ಳದೊಳಗೆ ಬೆಳಗ್ಗೆ 9:00ರಿಂದ ಸಂಜೆ 5:30ರವರೆಗೆ ಪ್ರವೇಶಿಸಲು ಪ್ರವೇಶ ಶುಲ್ಕವೆಂದು 20 ರೂ. ನಿಗದಿಪಡಿಸಲು ಸಭೆ ತೀರ್ಮಾನಿಸಿತು. ಅದೇ ರೀತಿ ಬೀಡಿನಗುಡ್ಡೆ ಬಯಲು ರಂಗಮಂದಿರದ ಬಳಕೆ ಹಾಗೂ ನಿರ್ವಹಣೆ, ವಿವಿಧ ಕಾರ್ಯಕ್ರಮಗಳಿಗೆ ಶುಲ್ಕ ನಿಗದಿಪಡಿಸುವ ಬಗ್ಗೆಯೂ ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು.