ಉ.ಪ್ರದೇಶ ಸರಕಾರದ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶ
ಲಕ್ನೊ, ಮಾ.25: ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಕ್ರಮ ಮಾಂಸದಂಗಡಿ ಮತ್ತು ಕಸಾಯಿಖಾನೆಗಳನ್ನು ಮುಚ್ಚಲು ಕ್ರಮ ಕೈಗೊಂಡಿದೆ. ಆದರೆ, ‘ತಾಂತ್ರಿಕ ಕಾರಣ’ ಎಂಬ ಕ್ಷುಲ್ಲಕ ನೆಪವೊಡ್ಡಿ ಸರಕಾರ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಪಶ್ಚಿಮ ಉತ್ತರಪ್ರದೇಶದ ಸಹರಣ್‌ಪುರದಲ್ಲಿ ಪರವಾನಿಗೆ ಹೊಂದಿರುವ ಕೋಣದ ಕಸಾಯಿಖಾನೆ -ಎಎಲ್‌ಎಂ ಇಂಡಸ್ಟ್ರೀಸ್ ಸಂಸ್ಥೆಯ ಮೇಲೂ ರಾಜ್ಯ ಸರಕಾರ ಗದಾಪ್ರಹಾರ ನಡೆಸಿದೆ ಎಂದು ಸಂಸ್ಥೆಯ ಮಾಲಕರು ಅಳಲು ತೋಡಿಕೊಂಡಿದ್ದಾರೆ. ಅಂತರ್ಜಲವನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಿ ತಾವು ಸಲ್ಲಿಸಿದ್ದ ಅರ್ಜಿ ಇನ್ನೂ ಇತ್ಯರ್ಥವಾಗದ ಕಾರಣ ನೀಡಿ ಕಸಾಯಿಖಾನೆಯನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದವರು ಹೇಳಿದ್ದಾರೆ. ಮೀರತ್‌ನಲ್ಲಿರುವ ಆಲ್ ಅಕ್ಸಾ ಮತ್ತು ಆಲ್ ಯಾಸಿರ್ ಎಂಬ ಮಾಂಸ ಸಂಸ್ಕರಣಾ ಘಟಕಗಳನ್ನು ಮುಚ್ಚಿಸಲು ಸರಕಾರ ನೀಡಿದ ಕಾರಣ- ಈ ಸಂಸ್ಥೆಗಳು ಮೀರತ್ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ನಕ್ಷೆಯನ್ನು ಹೊಂದಿಲ್ಲ ಎಂಬುದಾಗಿದೆ. ಬಿಜ್ನೋರ್‌ನಲ್ಲಿರುವ ಉಮರ್ ಇಂಟರ್‌ನ್ಯಾಷನಲ್ ಎಂಬ ಪರವಾನಿಗೆ ಹೊಂದಿದ ಕಸಾಯಿಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿ, ಈ ಸಂಸ್ಥೆ ನವೀಕರಿಸಿದ ಪರವಾನಿಗೆಯನ್ನು ಅಧಿಕಾರಿಗಳಿಗೆ ನೀಡಿಲ್ಲ ಎಂಬ ಕಾರಣ ನೀಡಿ ಕಸಾಯಿಖಾನೆಯನ್ನು ಮುಚ್ಚಿಸಿದ್ದರು. ಈ ಪ್ರತಿಯೊಂದು ಪ್ರಕರಣದಲ್ಲೂ ಪರವಾನಿಗೆಯ ವಿಷಯದಲ್ಲಿ ತಪ್ಪು ಅಥವಾ ಒಂದು ಸಣ್ಣ ತಾಂತ್ರಿಕ ತಪ್ಪು ಕಂಡು ಹಿಡಿದು ತೀವ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಮಾಂಸ ರಫ್ತುದಾರರ ಯೂನಿಯನ್ ಅಭಿಪ್ರಾಯ ವ್ಯಕ್ತಪಡಿಸಿದೆ. ಫ್ಯಾಕ್ಟರಿಯಲ್ಲಿರುವ ಒಂದು ಕ್ಯಾಮರಾ ಕಾರ್ಯ ನಿರ್ವಹಿಸದ ಕಾರಣ ಫ್ಯಾಕ್ಟರಿಯ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ತನಗೆ ಸೂಚಿಸಲಾಯಿತು ಎಂದು ಯೂನಿಯನ್‌ನ ಸದಸ್ಯ ಫೌಝಾನ್ ಅಲವಿ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಲಕ್ನೊದಲ್ಲಿರುವ ಫೌಝಾನ್, ತನ್ನ ಕಾರ್ಖಾನೆಯ ಭವಿಷ್ಯದ ಬಗ್ಗೆ ಖಚಿತಪಡಿಸಿಕೊಳ್ಳಲು ಮುಖ್ಯ ಮಂತ್ರಿಯನ್ನು ಭೇಟಿಯಾಗಲು ಕಾಯುತ್ತಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಯಾವುದೇ ನೋಟಿಸ್ ನೀಡಲಾಗಿಲ್ಲ. ಅಲ್ಲದೆ ಉತ್ತರಿಸಲು ಅವಕಾಶವನ್ನೂ ನೀಡಲಾಗಿಲ್ಲ. ಕೊಲೆ ಆರೋಪಿಗೂ ತನ್ನ ನಿರ್ದೋಷಿತ್ವ ಸಾಬೀತುಪಡಿಸಲು ಒಂದು ಅವಕಾಶ ನೀಡಲಾಗುತ್ತದೆ. ಆದರೆ, ಸ್ವತಂತ್ರ ಭಾರತದ ಇತಿಹಾಸಲ್ಲೇ ಮೊತ್ತಮೊದಲ ಬಾರಿಗೆ ಯಾವುದೇ ನೋಟಿಸ್ ನೀಡದೆ ಅಧಿಕಾರಿಗಳ ತಂಡವೊಂದು ಬೀಗ ಮತ್ತು ಸೀಲ್‌ನೊಂದಿಗೆ ಕಾರ್ಖಾನೆಗಳಿಗೆ ತನಿಖೆಗೆಂದು ತೆರಳಿ, ತಮ್ಮನ್ನು ಸಮರ್ಥಿಸಿಕೊಳ್ಳಲು ಯಾವುದೇ ಅವಕಾಶವನ್ನು ಮಾಲಕರಿಗೆ ನೀಡದೆ ಕಾರ್ಖಾನೆಗಳಿಗೆ ಬೀಗ ಜಡಿಯುವ ಕಾರ್ಯ ನಡೆಸುತ್ತಿದೆ ಎಂದು ಅಖಿಲಭಾರತ ಮಾಂಸ ಮತ್ತು ಜಾನುವಾರು ರಫ್ತುದಾರರ ಯೂನಿಯನ್ ಎನ್‌ಡಿ ಟಿವಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಭಾರತವು ಕೋಣದ ಮಾಂಸ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದೇಶದ ಕಸಾಯಿಖಾನೆಗಳಲ್ಲಿ ಮೂರನೆ ಎರಡರಷ್ಟು ಉತ್ತರಪ್ರದೇಶ ರಾಜ್ಯದಲ್ಲಿದೆ. ಇದೀಗ ಭಾರತಕ್ಕೆ ಉತ್ತರ ಅಮೆರಿಕ ಮತ್ತು ಬ್ರೆಝಿಲ್ ದೇಶಗಳಿಂದ ತೀವ್ರ ಸ್ಪರ್ಧೆ ಇದಿರಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ಚಿಂತಿಸದ ರಾಜ್ಯ ಸರಕಾರ ಚುನಾವಣೆ ವೇಳೆ ನೀಡಿದ ಆಶ್ವಾಸನೆಯಂತೆ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುವಂತೆ ನಮಗೆ ನಿರ್ದೇಶನ ನೀಡಲಾಗಿದೆ. ಪರವಾನಿಗೆ ವಿಷಯದಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಅಂತಹ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಖುದ್ದು ಮುಖ್ಯಮಂತ್ರಿಯವರೇ ಈ ಆದೇಶ ನೀಡಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲೂ ಈ ಆಶ್ವಾಸನೆ ನೀಡಲಾಗಿದೆ. ನಾವಿದಕ್ಕೆ ಬದ್ಧರಾಗಿದ್ದೇವೆ ಎಂದು ಉ.ಪ್ರದೇಶದ ಇಂಧನ ಇಲಾಖೆಯ ನೂತನ ಸಚಿವ ಶ್ರೀಕಾಂತ ಶರ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವಿಷಯದ ಕುರಿತು ಮಾಧ್ಯಮದೆದುರು ಹೇಳಿಕೆ ನೀಡದಂತೆ ಅಧಿಕಾರಿಗಳಿಗೆ ಸರಕಾರ ಎಚ್ಚರಿಕೆ ನೀಡಿದೆ. ರಾಜ್ಯದ ಹಲವು ಮಾಂಸ ಸಂಸ್ಕರಣಾ ಕಾರ್ಖಾನೆಗಳ ವಿರುದ್ಧ ಬಳಸಲಾಗಿರುವ ‘ತಾಂತ್ರಿಕ ಕಾರಣ’ ಕ್ಷುಲ್ಲಕವಾಗಿದೆ. ಆದರೆ ನಾವು ಆದೇಶ ಪಾಲಿಸದೆ ವಿಧಿಯಿಲ್ಲ ಎಂದು ತನ್ನ ಗುರುತು ಬಹಿರಂಗಗೊಳಿಸಲು ನಿರಾಕರಿಸಿರುವ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಕೈರಾನಾ: ಮಾಂಸ ಸಂಸ್ಕರಣ ಘಟಕಕ್ಕೆ ಬೀಗಮುದ್ರೆ
ಮುಝಫ್ಫರ್‌ನಗರ,ಮಾ.25: ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ಬೃಹತ್ ಮಾಂಸ ಸಂಸ್ಕರಣಾ ಘಟಕಕ್ಕೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ಘಟಕವು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆಯೆಂದು ಆರೋಪಿಸಿ ಅವರು ಅದನ್ನು ಮುಚ್ಚುಗಡೆಗೊಳಿಸಿದ್ದಾರೆ.
ಶಾಮ್ಲಿ ಜಿಲ್ಲೆಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿಜಯ್ ಪ್ರಕಾಶ್ ನೇತೃತ್ವದ ಜಿಲ್ಲಾ ಅಧಿಕಾರಿಗಳ ತಂಡವೊಂದು ಶುಕ್ರವಾರ ಮೀಮ್ ಆಗ್ರೋ ಫುಡ್ಸ್ ಪ್ರೈ. ಲಿಮಿಟೆಡ್ ಕಂಪೆನಿಯ ಮಾಂಸ ಸಂಸ್ಕರಣಾ ಘಟಕದಲ್ಲಿ ತಪಾಸಣೆ ನಡೆಸಿದ ಬಳಿಕ ಅದಕ್ಕೆ ಬೀಗಮುದ್ರೆ ಹಾಕಿತೆಂದು ವೃತ್ತಾಧಿಕಾರಿ ಭೂಷಣ್ ವರ್ಮಾ ತಿಳಿಸಿದ್ದಾರೆ. ಈ ಮಧ್ಯೆ ಲೈಸೆನ್ಸ್ ಇಲ್ಲದೆ ಕಾರ್ಯಾಚರಿಸುತ್ತಿದ್ದವು ಎನ್ನಲಾದ ಥಾಣಾ ಭವನ್, ಜಲಾಲಬಾದ್ ಹಾಗೂ ಶಾಮ್ಲಿ ನಗರಗಳ ಹಲವು ಮಾಂಸದಂಗಡಿಗಳನ್ನು ಮುಚ್ಚಲಾಗಿದೆಯೆಂದು ಅವರು ಹೇಳಿದ್ದಾರೆ.
ಮುಝಫ್ಫರ್ ಜಿಲ್ಲೆಯ ಬುಧನಾ, ಖಟೋಲಿ, ಶಾಪುರ್ ಹಾಗೂ ಚರ್ತವಾಲ್ ಪಟ್ಟಣಗಳಲ್ಲಿಯೂ ಇಂತಹ ಹಲವಾರು ಮಾಂಸದಂಗಡಿಗಳನ್ನು ಮುಚ್ಚಲಾಗಿದೆ.