×
Ad

ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕ, ತ್ವರಿತ ನಿರ್ಧಾರ ಅಗತ್ಯ: ಪ್ರಮೋದ್ ಮಧ್ವರಾಜ್

Update: 2017-03-25 22:23 IST

ಉಡುಪಿ, ಮಾ.25: ಜಿಲ್ಲೆಯನ್ನು ಪ್ರವಾಸೋದ್ಯಮದಲ್ಲಿ ಮುಂಚೂಣಿಗೆ ತರಲು ಪೂರಕ ಹಾಗೂ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಿ. ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಕ್ಕೆ ತನ್ನಿ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಯೋಜನೆಗಳ ಅನುಷ್ಠಾನಕ್ಕೆ ಸಮಯಮಿತಿ ನಿಗದಿಪಡಿಸಿ ಎಂದು ಶನಿವಾರ ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ನಿರ್ದೇಶನ ನೀಡಿದರಲ್ಲದೇ, ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಅರ್ಹ ಫಲಾನುಭವಿಗಳೆಲ್ಲರಿಗೂ ಟ್ಯಾಕ್ಸಿ ವಿತರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಮೂರು ಹೌಸ್‌ಬೋಟ್ ಉದ್ಯಮಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಆರ್. ಅನಿತ ಮಾಹಿತಿ ನೀಡಿದರು.

ಬೀಚ್ ಸಂಪರ್ಕ ರಸ್ತೆ ಅಗಲೀಕರಣದ ಬಗ್ಗೆಯೂ ಚರ್ಚೆ ನಡೆಯಿತು. ಕೇಂದ್ರ ಸರಕಾರ ಜಿಲ್ಲೆಗೆ ನೀಡಿದ 9.13 ಕೋಟಿ ರೂ. ಅನುದಾನದಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿದಿರುವ ಕಾಮಗಾರಿಗಳ ಬಗ್ಗೆ ಕ್ರಮ ವಹಿಸಲು ಸೂಚಿಸಲಾಯಿತು. ಹೋಮ್ ಸ್ಟೇ ನೋಂದಣಿಯನ್ನು ಸಮಯಮಿತಿಯೊಳಗೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಎನ್‌ಒಸಿ ನೀಡುವ ಪಂಚಾಯಿತಿ ಗಳಿಗೆ ಸುತ್ತೋಲೆ ಮೂಲಕ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಹೋಮ್‌ಸ್ಟೇ ಹಾಗೂ ಸಂಬಂಧಪಟ್ಟವರ ಜೊತೆ ಸೇರಿ ಕಾರ್ಯಾಗಾರವೊಂದನ್ನು ನಡೆಸಲು ಸಚಿವರು ಸೂಚಿಸಿದರು. ಕಾಪುವಿನ ಕಡಲಕಿನಾರೆಯಲ್ಲಿ ಸ್ಕೂಬಾ ಡೈವಿಂಗ್ ಸೆಂಟರ್ ನಡೆಸಲು ಅನುಮತಿ ನೀಡುವ ಕುರಿತು ಚರ್ಚಿಸಲಾಯಿತು. ಸ್ಕೈ ಡೈವಿಂಗ್ ನಡೆಸುವ ಬಗ್ಗೆಯೂ ಚರ್ಚೆ ನಡೆಯಿತು.

ತಮ್ಮ ಕ್ರೀಡಾ ಇಲಾಖೆಯಿಂದ ಮುರುಡೇಶ್ವರ ಮತ್ತು ಮಲ್ಪೆಗೆ ಸ್ಕೂಬಾ ಡೈವಿಂಗ್‌ಗೆ ಅಗತ್ಯ ಎರಡು ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಮುಂದಿನ ಹಂತದಲ್ಲಿ ಕಾಪುವಿಗೆ ಒಂದು ಕೋಟಿ ರೂ. ನೀಡುವ ಭರವಸೆಯನ್ನೂ ನೀಡಿದರು.

ಸಭೆಯಲ್ಲಿ ಬೀಚ್‌ಗಳನ್ನು ಅಭಿವೃದ್ಧಿ ಪಡಿಸಲು ಟೆಂಡರ್ ಪಡೆದ ಸಂಸ್ಥೆಗಳ ಪ್ರತಿನಿಧಿಗಳಾದ ಸುದೇಶ್, ಯತೀಶ್ ಬೈಕಂಪಾಡಿ, ಮನೋಹರ ಶೆಟ್ಟಿ, ಅಪ್ನಾ ಹಾಲಿಡೇಸ್‌ನ ನಾಗರಾಜ್ ಹೆಬ್ಬಾರ್ ಬೀಚ್ ಅಭಿವೃದ್ಧಿಗೆ ಹಲವು ಸಲಹೆಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News