ನಗರೋತ್ಥಾನ ಯೋಜನೆ; ಕ್ರಿಯಾಯೋಜನೆಗೆ ಅನುಮೋದನೆ
ಉಡುಪಿ, ಮಾ.25: ನಗರೋತ್ಥಾನ ಯೋಜನೆಯಡಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ಸ್ವೀಕೃತವಾಗಿರುವ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಮಾರ್ಗಸೂಚಿಯಂತೆ ಪರಿಶೀಲಿಸಿ ಅನುಮೋದನೆ ನೀಡಲಾಯಿತು. ಶನಿವಾರ ಜಿಲ್ಲೆಯ ನಗರೋತ್ಥಾನ-3 ಯೋಜನೆಯಡಿ ಉಡುಪಿ ನಗರಸಭೆಗೆ 35 ಕೋ.ರೂ., ಕುಂದಾಪುರ ಪುರಸಭೆಗೆ 7.50 ಕೋಟಿ ರೂ.ನ್ನು ಒಳಚರಂಡಿ ಭೂ ಸ್ವಾಧೀನಕ್ಕೆ ಕಾಯ್ದಿರಿಸಿ ಆದೇಶಿಸಲಾಯಿತು. ಕಾಪು ಪುರಸಭೆಗೆ 10 ಕೋಟಿ ರೂ., ಸಾಲಿಗ್ರಾಮ ಪಪಂಗೆ 2 ಕೋಟಿ ರೂ. ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು. ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯಾ ಸಂಜೀವ್, ಸಾಲಿಗ್ರಾಮ ಪಪಂ ಅಧ್ಯಕ್ಷೆ ವಸುಮತಿ ನಾಗೇಶ್, ಕಾರ್ಕಳ ಪುರಸಭೆ ಅಧ್ಯಕ್ಷೆ ಅನಿತಾ ಆರ್. ಅಂಚನ್ ಅವರನ್ನೊಳಗೊಂಡಂತೆ ಎಲ್ಲ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅರುಣಪ್ರಭಾ ವಿಷಯಗಳನ್ನು ಮಂಡಿಸಿದರು.