×
Ad

ಕೋಮುಗಲಭೆಯಾಗಿ ಮಾರ್ಪಟ್ಟ ವಿದ್ಯಾರ್ಥಿ ಸಂಘರ್ಷಕ್ಕೆ ಓರ್ವ ಬಲಿ

Update: 2017-03-26 09:05 IST

ಅಹ್ಮದಾಬಾದ್, ಮಾ.26: ಇಬ್ಬರು ವಿದ್ಯಾರ್ಥಿಗಳ ನಡುವಿನ ಸಂಘರ್ಷ ಕೋಮು ಗಲಭೆಯಾಗಿ ಮಾರ್ಪಟ್ಟಿದೆ. ಗುಜರಾತ್‌ನ ಪಠಾಣ್ ಜಿಲ್ಲೆಯ ವಡಾವಲಿ ಗ್ರಾಮದಲ್ಲಿ ಭುಗಿಲೆದ್ದ ಕೋಮುದಳ್ಳುರಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಇತರ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

10ನೇ ತರಗತಿ ಪರೀಕ್ಷೆ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಉಂಟಾದ ವೈಮನಸ್ಯ ಇದಕ್ಕೆ ಮೂಲ. ಪರೀಕ್ಷೆ ಮುಗಿದ ಬಳಿಕ ಶಾಲೆಯಲ್ಲಿ ಮೆಟ್ಟಲು ಹತ್ತುತ್ತಿದ್ದಾಗ ಇಬ್ಬರ ಪೈಕಿ ಒಬ್ಬ ಬಿದ್ದ. ಇದು ಪರಸ್ಪರ ವಾಗ್ವಾದಕ್ಕೆ ಕಾರಣವಾಗಿ ಪರಸ್ಪರ ಹಲ್ಲೆಯೂ ನಡೆಯಿತು. ಇತರ ವಿದ್ಯಾರ್ಥಿಗಳು ಕೂಡಾ ಗುಂಪು ಸೇರಿ ಗುಂಪುಗಳ ನಡುವೆ ಹೊಡೆದಾಟ ನಡೆದದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ವಿದ್ಯಾರ್ಥಿಗಳ ಜಗಳದ ಸುದ್ದಿ ಊರಿಗೆ ತಲುಪುತ್ತಿದ್ದಂತೆ ಸುಮಾರು ಐದು ಸಾವಿರ ಮಂದಿ ಮುಸ್ಲಿಮರ ಮನೆಗಳ ಮೇಲೆ ದಾಳಿ ಮಾಡಿ 10ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿದರು. 20 ಮನೆಗಳಿಗೆ, ವಾಹನಗಳಿಗೆ ಮತ್ತು ಇತರ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರು ಎಂದು ಹೆಚ್ಚುವರಿ ಡಿಜಿಪಿ ತೀರ್ಥರಾಜ್ ಹೇಳಿದ್ದಾರೆ. ಇಬ್ರಾಹೀಂ ಬೆಲಿಮ್ (25) ಎಂಬ ವ್ಯಕ್ತಿ ಮೃತಪಟ್ಟಿದ್ದು, ಗಾಯಾಳುಗಳ ಪೈಕಿ ಐದು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗುಂಪುಗಳನ್ನು ಚದುರಿಸಲು ಏಳು ಸುತ್ತು ಗುಂಡು ಹಾರಿಸಲಾಗಿದ್ದು, ಅಶ್ರುವಾಯು ಪ್ರಯೋಗಿಸಲಾಗಿದೆ ಎಂದು ವಿವರಿಸಿದ್ದಾರೆ,

ನೂರಾರು ಮುಸ್ಲಿಂ ಕುಟುಂಬಗಳು ಪಕ್ಕದ ಗ್ರಾಮಗಳಿಗೆ ಓಡಿ ರಕ್ಷಣೆ ಪಡೆದಿದ್ದಾರೆ. ಜತೆಗೆ ಪಕ್ಕದ ಧಾರಾಪುರ ಗ್ರಾಮದ ವೈದ್ಯಕೀಯ ಕಾಲೇಜಿನಲ್ಲಿ ಕೆಲ ಕುಟುಂಬಗಳು ರಕ್ಷಣೆ ಪಡೆಯುತ್ತಿದ್ದಾರೆ.

ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣಕ್ಕೆ ಬಂದಿದ್ದರೂ, ರಾಜ್ಯ ಮೀಸಲು ಪೊಲೀಸ್ ಪಡೆಯ ಮೂರು ತುಕಡಿಗಳನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ಅಧಿಕ ಸಂಖ್ಯೆಯಲ್ಲಿ ಮುಸ್ಲಿಮರು ಇರುವ ಈ ಗ್ರಾಮವು ಸರ್ಕಾರದ ಮಹತ್ವಾಕಾಂಕ್ಷಿ ’ಸಮರಸ ಗ್ರಾಮ’ವಾಗಿದ್ದು, ಇಲ್ಲಿ ಗ್ರಾಮಸ್ಥರು ತಮ್ಮ ವಾರ್ಡ್ ಸದಸ್ಯರನ್ನು ಮತ್ತು ಸರಪಂಚರನ್ನು ಒಮ್ಮತದಿಂದ ಆಯ್ಕೆ ಮಾಡಿ, ಚುನಾವಣೆಗೆ ಅವಕಾಶ ನೀಡುವುದಿಲ್ಲ. ಇಲ್ಲಿ ಮುಸ್ಲಿಂ ಸರಪಂಚರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News