×
Ad

ನ್ಯಾಯಮೂರ್ತಿಗಳಿಗೆ ಬಂಪರ್ ಕೊಡುಗೆ!

Update: 2017-03-26 09:09 IST

ಹೊಸದಿಲ್ಲಿ, ಮಾ.26: ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ಶೇಕಡ 200ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಶಿಫಾರಸು ಜಾರಿ ಕಾರಣ ವೇತನ ಹೆಚ್ಚಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ವೇತನವನ್ನೂ ಪರಿಷ್ಕರಿಸಲಾಗಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಈಗ ತುಟ್ಟಿಭತ್ತೆ ಹಾಗೂ ಇತರ ಭತ್ತೆಗಳನ್ನು ಹೊರತುಪಡಿಸಿ ಒಂದು ಲಕ್ಷ ರೂಪಾಯಿ ಮಾಸಿಕ ವೇತನವಿದ್ದು, ಇದು ರೂ.2.8 ಲಕ್ಷಕ್ಕೆ ಹೆಚ್ಚಲಿದೆ. ಇದರ ಜತೆಗೆ ಅಧಿಕೃತ ನಿವಾಸ, ಕಾರು, ಸಿಬ್ಬಂದಿ ಹಾಗೂ ಇತರ ಭತ್ತೆಗಳು ಇರುತ್ತವೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮಾಸಿಕ ವೇತನ 2.5 ಲಕ್ಷ ರೂ. ಆಗಲಿದೆ. ಜತೆಗೆ ಸಂಪುಟ ಕಾರ್ಯದರ್ಶಿ, ಸಿಎಜಿ ಹಾಗೂ ಸಿಇಸಿಗೆ ಸಮಾನವಾದ ಭತ್ತೆಗಳು ಹಾಗೂ ಇತರ ಸೌಲಭ್ಯಗಳಿವೆ. ಹೈಕೋರ್ಟ್ ನ್ಯಾಯಮೂರ್ತಿಗಳ ವೇತನ ಮಾಸಿಕ 2.25 ಲಕ್ಷ ರೂ. ಆಗಲಿದೆ. ಇದು ಕೇಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ವೇತನಕ್ಕೆ ಸಮವಾಗಲಿದೆ.

ಆದರೆ ಸುಪ್ರೀಂಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಿದ್ದ ಸಮಿತಿ ಮಾಡಿದ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸಿಲ್ಲ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮಾಸಿಕ 3 ಲಕ್ಷ ರೂ. ನಿಗದಿಪಡಿಸುವಂತೆ ಸಮಿತಿ ಪ್ರಸ್ತಾವನೆ ಸಲ್ಲಿಸಿತ್ತು. ಇದರ ಜತೆಗೆ ನಿವೃತ್ತ ವೈದ್ಯರ ಪಿಂಚಣಿ ಹಾಗೂ ಇತರ ಸೌಲಭ್ಯಗಳೂ ಹೆಚ್ಚಲಿವೆ. ಕೆಲ ತಿಂಗಳ ಹಿಂದೆ ಈ ಸಮಿತಿ ಸರ್ಕಾರಕ್ಕೆ ವರದಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News