ಸರ್ಜಿಕಲ್ ದಾಳಿ: ಹುಳುಕುಗಳೇನು ಗೊತ್ತೇ?
ಹೊಸದಿಲ್ಲಿ, ಮಾ.26: ಪಾಕಿಸ್ತಾನದ ಆಯಕಟ್ಟಿನ ಪ್ರದೇಶದ ಉಗ್ರರ ತಾಣಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಬಗ್ಗೆ ಬೀಗುತ್ತಿದ್ದ ಕೇಂದ್ರ ಸರ್ಕಾರಕ್ಕೆ, ದಾಳಿಯಲ್ಲಿನ ಲೋಪಗಳು ಮುಜುಗರ ತಂದಿವೆ. ಸೇನೆಯ ಹೆಲಿಕಾಪ್ಟರ್ ಘಟಕಗಳು ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜಿತರಾಗಿದ್ದ ಸೈನಿಕರ ನಡುವಿನ ಸಂವಹನ ವ್ಯವಸ್ಥೆ ಕಳಪೆಯಾಗಿದ್ದರಿಂದ ವಾಯುದಾಳಿಯಲ್ಲಿ ವಾಯುಪಡೆ ಆಸ್ತಿಗಳನ್ನು ಗರಿಷ್ಠ ಸಾಮರ್ಥ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಇದೀಗ ಬಹಿರಂಗವಾಗಿದೆ.
ವಾಯುಪ್ರದೇಶದಿಂದ ನೆಲಮಟ್ಟಕ್ಕೆ ಸಂವಹನ ವ್ಯವಸ್ಥೆ ವಿಶ್ವಾಸಾರ್ಹ ಮಟ್ಟದಲ್ಲಿ ಇಲ್ಲದ ಕಾರಣ, ಪೈಲಟ್‌ಗಳು ಕೊನೆಕ್ಷಣದಲ್ಲಿ ಯುದ್ಧ ಯೋಜನೆಗಳಲ್ಲಿ, ದಾಳಿಯಲ್ಲಿ ಬಲಿಯಾಗುವ ಸೈನಿಕರ ಸಾಗಾಟ ಅಥವಾ ಮುಂದಿನ ಸಾಲಿನಲ್ಲಿ ನಿಂತಿರುವ ಪಡೆಯ ಗುರುತಿಸುವಿಕೆ ಮತ್ತಿತರ ಪ್ರಮುಖ ರಣತಂತ್ರಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಯಿತು ಎನ್ನುವುದನ್ನು ಸೇನಾ ವಿನ್ಯಾಸ ಬ್ಯೂರೊ (ಎಡಿಬಿ) ವರದಿ ಬೆಳಕಿಗೆ ತಂದಿದೆ.
ಸೇನೆಯ ಯಾನದ ಹೆಲಿಕಾಪ್ಟರ್ ಹಾಗೂ ನೆಲಮಟ್ಟದ ಪಡೆಗಳ ನಡುವಿನ ಸಂವಹನ ವ್ಯವಸ್ಥೆ ಸುಧಾರಿಸುವಂತೆ ಸಲಹೆ ಮಾಡಲಾಗಿದೆ. ತಕ್ಷಣಕ್ಕೆ ಪರಿಹರಿಸಬೇಕಾದ ಒಟ್ಟು 28 ಹೊಸ ಸಮಸ್ಯೆಗಳನ್ನು ಕೂಡಾ ವರದಿಯಲ್ಲಿ ಪಟ್ಟಿ ಮಾಡಲಾಗಿದೆ. ಈ ಹಿಂದಿನ ವರದಿಯಲ್ಲಿ ಎಡಿಬಿ ಒಟ್ಟು ಇಂಥ 50 ಸಮಸ್ಯೆಗಳನ್ನು ಪಟ್ಟಿ ಮಾಡಿದ್ದು, ಇದೀಗ ಭಾರತದ ಸೇನೆಗಳು ತಮ್ಮ ಗರಿಷ್ಠ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾದರೆ ಸೇನಾ ವ್ಯವಸ್ಥೆಯಲ್ಲಿರುವ ಒಟ್ಟು 78 ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕಾಗುತ್ತದೆ.
72 ಪುಟಗಳ ಈ ವರದಿಯನ್ನು ಶುಕ್ರವಾರ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಬಿಡುಗಡೆ ಮಾಡಿದ್ದಾರೆ. "ವಿಶೇಷ ಪಡೆ ತಂಡಗಳು ವಿರೋಧಿ ಪ್ರದೇಶದ ಗಡಿಗೊಳಗೆ ನುಸುಳುವುದು, ವಿರೋಧಿ ಪ್ರದೇಶದ ಪಥದರ್ಶಕ ತಂಡಗಳ ನಿಯೋಜನೆ, ಸಾವು ನೋವುಗಳ ಸಂದರ್ಭದಲ್ಲಿ ತೆರವು ಕಾರ್ಯಾಚರಣೆಯಂಥ ಅಂಶಗಳಲ್ಲಿ ಪೈಲಟ್‌ಗಳು ತಮ್ಮದೇ ಸೇನೆಯ ನಿಖರವಾದ ಪ್ರದೇಶಗಳ ಬಗ್ಗೆ ಅರಿವು ಹೊಂದಿರಬೇಕಾದ್ದು ಅಗತ್ಯ" ಎಂದು ಸ್ಪಷ್ಟಪಡಿಸಿದೆ.