ಆಂತರಿಕ ವಿಮಾನಯಾನ: ಜಪಾನ್ ಅನ್ನು ಹಿಂದಿಕ್ಕಿದ ಭಾರತದ ಸ್ಥಾನ ಎಷ್ಟು ಗೊತ್ತೇ?
ಹೊಸದಿಲ್ಲಿ, ಮಾ.26: ದೇಶದಲ್ಲಿ ಆಂತರಿಕ ವಾಯು ಪ್ರಯಾಣ ಬೇಡಿಕೆ ಹೆಚ್ಚಿರುವುದರಿಂದ ಭಾರತೀಯ ವಿಮಾನಯಾನ ಉದ್ಯಮ ಹೊಸ ಎತ್ತರವನ್ನು ತಲುಪಿದೆ. ಇದೀಗ ಇಡೀ ವಿಶ್ವದಲ್ಲೇ ಮೂರನೇ ಅತಿದೊಡ್ಡ ಸಂಖ್ಯೆಯ ಆಂತರಿಕ ವಾಯುಯಾನಿಗಳನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುವ ವಾಯು ಪ್ರಯಾಣ ಮಾರುಕಟ್ಟೆಯಾಗಿ ಭಾರತ ಹಲವು ತಿಂಗಳ ಕಾಲ ಅಗ್ರಸ್ಥಾನದಲ್ಲಿತ್ತು. ಅತಿಹೆಚ್ಚು ಮಂದಿ ಆಂತರಿಕ ವಿಮಾನಯಾನಿಗಳನ್ನು ಕಳೆದ ವರ್ಷ ಹೊಂದಿದ್ದ ಜಪಾನ್ ದೇಶವನ್ನು ನಾಲ್ಕನೇ ಸ್ಥಾನಕ್ಕೆ ಭಾರತ ತಳ್ಳಿದೆ.
2016ರಲ್ಲಿ ಭಾರತದಲ್ಲಿ 10 ಕೋಟಿ ಮಂದಿ ದೇಶೀಯವಾಗಿ ವಿಮಾನಯಾನ ಕೈಗೊಂಡಿದ್ದಾರೆ. ಜಪಾನ್‌ನಲ್ಲಿ 9.7 ಕೋಟಿ ಮಂದಿ ವಿಮಾನಯಾನ ಕೈಗೊಂಡಿದ್ದಾರೆ ಎಂದು ಸೆಂಟರ್ ಫಾರ್ ಏಷ್ಯಾ- ಫೆಸಿಫಿಕ್ ಏವಿಯೇಶನ್ (ಸಿಎಪಿಎ) ವರದಿಯಲ್ಲಿ ಹೇಳಲಾಗಿದೆ. 2015ರಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿತ್ತು ಎಂದು 'ಕಾಪಾ'ದ ಭಾರತೀಯ ಮುಖ್ಯಸ್ಥ ಕಪಿಲ್ ಕೌಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನಯಾನಿಗಳ ಸಂಖ್ಯೆಯನ್ನು ಒಟ್ಟು ಸೇರಿಸಿದರೆ ಭಾರತವು ಬ್ರಿಟನ್ ಜತೆಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದೆ. 2015ರಲ್ಲಿ ಬ್ರಿಟನ್ ಮುಂದಿತ್ತು.