ಇನ್ನು ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಡ್ಡಾಯ
ಹೊಸದಿಲ್ಲಿ, ಮಾ.26: ಒಂದೇ ಹೆಸರಿನಲ್ಲಿ ಹಲವು ಡ್ರೈವಿಂಗ್ ಲೈಸೆನ್ಸ್ ಮಾಡುವುದನ್ನು ತಡೆಯುವ ಉದ್ದೇಶಕ್ಕಾಗಿ ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ನವೀಕರಣಕ್ಕೆ ಆಧಾರ‍್ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ನೀಡಿದೆ.
ಕೇಂದ್ರ ಸರಕಾರ ಈ ಬಗ್ಗೆ ರಾಜ್ಯ ಸರಕಾರಗಳಿಗೆ ಆದೇಶ ನೀಡಿದ್ದು, ಇದರಿಂದ ಹಲವು ಲೈಸೆನ್ಸ್ ಗಳಲ್ಲಿ ವಿಮೆ ಮಾಡಿಸುವುದಕ್ಕೆ ಕಡಿವಾಣ ನಿರೀಕ್ಷಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ, ಅಪರಾಧ ಮತ್ತಿತರ ಸಂದರ್ಭಗಳಲ್ಲಿ ನುನುಚಿಕೊಳ್ಳುವ ಉದ್ದೇಶಕ್ಕಾಗಿ ಒಂದೇ ಹೆಸರಲ್ಲಿ ಹಲವು ಲೈಸೆನ್ಸ್‌ಗಳನ್ನು ಮಾಡುವ ಪ್ರಕರಣಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ
ಸಿಮ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಗಳಿಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ ಬೆನ್ನಲ್ಲೇ ಕೇಂದ್ರ ಸರಕಾರ ಡ್ರೈವಿಂಗ್ ಲೈಸೆನ್ಸ್ ನ್ನು ಆಧಾರ್ ಕಾರ್ಡ್ ಜೊತೆ ಸಂಯೋಜನೆಗೆ ಆದೇಶ ಹೊರಡಿಸಿದೆ.
ಮೊಬೈಲ್ ಸಿಮ್ ಕಾರ್ಡ್ ಪಡೆಯಲು ಮತ್ತು ಇದೀಗ ಬಳಕೆಯಲ್ಲಿರುವ ಸಿಮ್‌ಗಳಿಗೆ ಆಧಾರ್ ನೀಡುವುದು ಶೀಘ್ರ ಕಡ್ಡಾಯವಾಗಲಿದೆ ಗ್ರಾಹಕರ ಸಿಮ್ ಕಾರ್ಡ್ ಗಳನ್ನು ಆಧಾರ್ ಜೊತೆ ಸಂಯೋಜನೆ ಮಾಡುವಂತೆ ಸೂಚಿಸಿದೆ. ಟೆಲಿಕಾಂ ಕಂಪನಿಗಳು ತನ್ನ ಎಲ್ಲಾ ಗ್ರಾಹಕರ ದಾಖಲೆಗಳನ್ನು ಮರು ಪರಿಶೀಲನೆ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಪಾವತಿ, ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯಗೊಳಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಡಿಸೆಂಬರ್ 31ರೊಳಗೆ ಪ್ಯಾನ್ ಕಾರ್ಡ್ ನಂಬರ್‌ಗೆ ಆಧಾರ್ ಸಂಖ್ಯೆ ಲಿಂಕ್ ಮಾಡದೇ ಇದ್ದಲ್ಲಿ, ಅಂತಹ ಪ್ಯಾನ್ ಕಾರ್ಡ್‌ಗಳ ಮಾನ್ಯತೆ ರದ್ದು ಮಾಡುವ ಕ್ರಮವನ್ನು ಜಾರಿಗೆ ತರಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.