ಸಿಸ್ಟರ್ ಅಭಯ ಕೊಲೆಯಾಗಿ ನಾಳೆಗೆ 25 ವರ್ಷ!: ತನಿಖೆ ಇನ್ನೂ ಮುಗಿದಿಲ್ಲ.
ಕೋಟ್ಟಯಂ, ಮಾ. 26: ಅಪರಾಧ ತನಿಖೆ ಕ್ಷೇತ್ರದಲ್ಲಿ ಇತಿಹಾಸವಾಗಿ ಮಾರ್ಪಟ್ಟ ಸಿಸ್ಟರ್ ಅಭಯ ಕೇಸಿಗೆ ನಾಳೆ 25ವರ್ಷ ತುಂಬಲಿದೆ. ಕೋಟ್ಟಯಂ ಪಯಸ್ ಟೆನ್ತ್ ಕಾನ್ವೆಂಟ್‌ನ ಬಾವಿಯಲ್ಲಿ ನಿಗೂಢವಾಗಿ ಸಿಸ್ಟರ್ ಅಭಯ ಮೃತಪಟ್ಟಸ್ಥಿತಿಯಲ್ಲಿ ಕಂಡು ಬಂದಿದ್ದರು. ಘಟನೆ ನಡೆದು ನಾಳೆ ಸೋಮವಾರಕ್ಕೆ ಇಪ್ಪತ್ತೈದು ವರ್ಷ ತುಂಬಲಿದೆ. ಆದರೆ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಫಾ. ಥಾಮಸ್ ಕೊಟ್ಟೂರ್, ಫಾ. ಜೋಸ್ ಪುತೃಕ್ಕಯಿಲ್, ಸಿಸ್ಟರ್ ಸ್ಟೆಫಿ ಪ್ರಕರಣದ ಆರೋಪಿಗಳನ್ನಾಗಿ ಸಿಬಿಐ ಆರೋಪ ಪಟ್ಟಿ ದಾಖಲಿಸಿ ಎಂಟು ವರ್ಷ ಕಳೆದಿದೆ. ಇದರ ನಡುವೆ ಕೊಲೆಪಾತಕಿಗಳನ್ನು ಪತ್ತೆಹಚ್ಚಲು ನ್ಯಾಯಪೀಠಕ್ಕೆ ಹತ್ತಿ ಇಳಿದ ಅಭಯರ ತಂದೆತಾಯಿಯೂ ಕಾಲನಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ.
ಕೋಟ್ಟಯಂ ಬಿಸಿಎಂ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸಿಸ್ಟರ್ ಅಭಯ ಹಾಸ್ಟೆಲ್ ಕಾಂಪೌಂಡ್‌ನ ಬಾವಿಯಲ್ಲಿ ಮೃತಪಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕ್ಷನ್ ಕೌನ್ಸಿಲ್‌ನ ಹೋರಾಟದ ಕಾರಣ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್‌ಗೆ ವಹಿಸಿಕೊಡಲಾಯಿತು. ಆದರೆ ಕ್ರೈಂ ಬ್ರಾಂಚ್ ಕೂಡಾ ಅಭಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಿರ್ಧರಿಸಿತು. 1993 ಮಾರ್ಚ್ 29ಕ್ಕೆ ಸಿಬಿಐ ಕೇಸನ್ನು ವಹಿಸಿಕೊಂಡಿತು. ಸಾಕ್ಷ್ಯವಿಲ್ಲ ಎನ್ನುವ ಕಾರಣದಿಂದ 1996ರಲ್ಲಿ ತನಿಖೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಸಿಬಿಐ ನ್ಯಾಯಾಲಯ ಇದನ್ನು ಒಪ್ಪಲಿಲ್ಲ. 1999ರಲ್ಲಿ ಮತ್ತು 2005ರಲ್ಲಿಕೂಡಾ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿತು. ಆದರೆ ನ್ಯಾಯಾಲಯ ಅದನ್ನೂ ಅಂಗೀಕರಿಸಲಿಲ್ಲ.
ತಿರುವನಂತಪುರಂ ಮುಖ್ಯ ರಾಸಾಯನಿಕ ಪರೀಕ್ಷಾ ಪ್ರಯೋಗಾಲಯದಲ್ಲಿ ಪರೀಕ್ಷಾ ವರದಿ ತಿದ್ದಲಾಗಿದೆ ಎನ್ನುವ ವರದಿಬಹಿರಂಗವಾದ ನಂತರ ಪ್ರಕರಣ ನಂತರ ಜೀವಂತವಾಯಿತು. ಇದರೊಂದಿಗೆ ಅಭಯ ಕೊಲೆ ಪ್ರಕರಣವನ್ನು ಮೊದಲು ತನಿಖೆ ನಡೆಸಿದ್ದ ಮಾಜಿಎಸ್ಸೈ ಆತ್ಮಹತ್ಯೆ ಮಾಡಿಕೊಂಡರು. ಸಿಬಿಐ ಅವರನ್ನು ಪ್ರಶ್ನಿಸಿದ ಬೆನ್ನಿಗೆ ಅವರು ಆತ್ಮಹತ್ಯೆ ಮಾಡಿದರು. ಅಭಯ ಕೊಲೆ ಪ್ರಕರಣಕ್ಕೆ ನಾಳೆಗೆ 25ವರ್ಷ ತುಂಬುತ್ತಿದೆ. ಈ ಪ್ರಯುಕ್ತ ಸೋಮವಾರ ತಿರುವನಂತಪುರಂ ಪ್ರೆಸ್ ಕ್ಲಬ್‌ನಲ್ಲಿ ನ್ಯಾಯ ವಿಳಂಬ ನ್ಯಾಯ ನಿರಾಕರಣೆಗೆ ಸಮ ಎನ್ನುವ ವಿಷಯದಲ್ಲಿ ಸೆಮಿನಾರ್ ನಡೆಯಲಿದೆ. ಶಾಸಕ ಒ.ರಾಜಗೋಪಾಲ್ ಉದ್ಘಾಟನೆ ನಡೆಸಲಿದ್ದಾರೆ. ಜಸ್ಟಿಸ್ ಡಿ. ಶ್ರೀದೇವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.