ಉಡುಪಿ: ಮೂರು ಹೊಸ ಪೊಲೀಸ್ ಗಸ್ತು ವಾಹನಕ್ಕೆ ಚಾಲನೆ
Update: 2017-03-26 17:42 IST
ಉಡುಪಿ, ಮಾ.26: ಉಡುಪಿ ನಗರಕ್ಕೆ ಮಂಜೂರಾಗಿರುವ ಮೂರು ಹೊಸ ಪೊಲೀಸ್ ಗಸ್ತು ವಾಹನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉಡುಪಿ ಎಸ್ಪಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಆಧುನಿಕ ವ್ಯವಸ್ಥೆಯ ವಾಹನಗಳನ್ನು ಕಲ್ಪಿಸುವುದರಿಂದ ಪೊಲೀಸ್ ಇಲಾಖೆಗೆ ಇನ್ನಷ್ಟು ಬಲ ಬರುತ್ತದೆ. ಈ ವಾಹನಗಳು ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲು ಸಹಕಾರಿಯಾಗಲಿವೆ. ಪ್ರತಿ ವಾಹನದಲ್ಲಿ ಮೂವರು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಅಗತ್ಯ ಬಿದ್ದರೆ ಇನ್ನು ಹೆಚ್ಚಿನ ವಾಹನವನ್ನು ಉಡುಪಿ ಜಿಲ್ಲೆಗೆ ಮಂಜೂರು ಮಾಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.