ಕಣ್ಣೂರಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಲೋಬೊ ಚಾಲನೆ
ಮಂಗಳೂರು, ಮಾ.26: ಕಣ್ಣೂರು ಪ್ರದೇಶವು ಮಂಗಳೂರು ಮಹಾನಗರದ ಪ್ರವೇಶ ದ್ವಾರವಾಗಿದೆ. ಆದ್ದರಿಂದ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು ಮಾತ್ರವಲ್ಲದೇ ಈ ಪ್ರದೇಶಕ್ಕೆ ಮೂಲಭೂತ ಸೌಕರ್ಯವನ್ನು ಒದಗಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಹೇಳಿದ್ದಾರೆ.
ಅವರು ಬೀಡು ಕಣ್ಣೂರು ಪ್ರದೇಶದ ತರಬೀಯತುಲಾಹ್ ಅನಾಮ್ ಮದ್ರಸ ಬಳಿಯಲ್ಲಿರುವ ಬೃಹತ್ ಚರಂಡಿಯ ಕಾಂಕ್ರೀಟಿಕರಣ ಕಾಮಗಾರಿಗೆ ರವಿವಾರ ಚಾಲನೆ ನೀಡಿದರು.
ಸುಮಾರು ರೂ. 45 ಲಕ್ಷ ರೂ.ನೆರನಿಂದ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಪ್ರದೇಶದಲ್ಲಿ ಜನರಿಗೆ ಸರಿಯಾದ ರಸ್ತೆ ಸೌಕರ್ಯ ಇಲ್ಲದಿರುವುದರಿಂದ, ಜನರಿಗೆ ನಡೆದಾಡಲು ಕಾಮಗಾರಿಯನ್ನು ನಡೆಸಲು ಇಚ್ಛಿಸಿದ್ದೇವೆ. ಅದಲ್ಲದೇ ಬಹುತೇಕ ಅಲ್ಪಸಂಖ್ಯಾತರ ವರ್ಗದ ಜನರು ಈ ಕಣ್ಣೂರು ಪ್ರದೇಶದಲ್ಲಿರುವುದರಿಂದ ಕರ್ನಾಟಕ ಸರಕಾರದ ವಿಶೇಷ ಯೋಜನೆಯಿಂದ 50 ಲಕ್ಷ ರೂ. ಮಂಜೂರಾಗಿದೆ. ಈ ನಿಧಿಯನ್ನು ಈ ಪ್ರದೇಶದಲ್ಲಿ ಆಗಬೇಕಾಗಿರುವ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ ಹಾಗೂ ಒಳ ಚರಂಡಿಯೋಜನೆಗೆ ಬಳಸಲಾಗುವುದು. ಅದಲ್ಲದೆ, ಶಾಸಕರ ಅನುದಾನದ ನಿಧಿಯಿಂದ ಹಾಗೂ ಎಸ್.ಎಫ್.ಸಿ. ನಿಧಿಯಿಂದಲೂ ಕೂಡಾ ಈ ಪ್ರದೇಶದ ಅಭಿವೃದ್ಧಿಗೆ ಬಳಸಲಾಗುವುದು ಎಂಬುದಾಗಿ ಶಾಸಕರು ತಿಳಿಸಿದರು.
ಈಗಾಗಲೇ ಈ ಪ್ರದೇಶದ ಇತಿಹಾಸ ಪ್ರಸಿದ್ಧ ಸುಮಾರು 400 ವರ್ಷಗಳ ಹಳೆಯ ನಡುಪಳ್ಳಿ ಮಸೀದಿಗೆ ತಾಗಿಕೊಂಡಿರುವ ತಡೆಗೋಡೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ ರೂ. ಮಂಜೂರಾತಿ ಆಗಿದೆ. ನೇತ್ರಾವತಿ ನದಿಯು ಈ ಮಸೀದಿಯನ್ನು ಸುತ್ತುವರಿದಿರುವುದರಿಂದ ಅದರ ತಡೆಗೋಡೆಯು ನೀರಿನ ರಭಸಕ್ಕೆ ಕೊರೆಯುತ್ತಿರುವುದರಿಂದ, ಅದನ್ನು ರಕ್ಷಣೆಗೆ ಈ ಕಾಮಗಾರಿಯನ್ನು ಕೈಗೊಳ್ಳಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೆ.ಎಸ್.ಟಿ.ಡಿ.ಸಿ ನಿರ್ದೇಶಕ ಹಮೀದ್ ಕಣ್ಣೂರು, ಕಣ್ಣೂರು ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ತರಬೀಯತುಲ್ಲಾಹ್ ಅನಾಮ್ ಮದ್ರಸದ ಅಧ್ಯಕ್ಷ ಹೈದರ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಕಣ್ಣೂರು, ಕಾಂಗ್ರೆಸ್ ಮುಖಂಡರಾದ ಉಮರಬ್ಬ, ಜಿನ್ನಪ್ಪ ಪೂಜಾರಿ, ಮುಹಮ್ಮದ್ ಶರೀಫ್, ಲತೀಫ್, ಡೆನ್ನಿಸ್ ಡಿಸಿಲ್ವ, ಅರುಣ್ ಕುವೆಲೊ, ಅಶ್ರಫ್ ಬೀಡು, ಜಿ.ಎಚ್. ಖಾದರ್, ಪಾಲಿಕೆಯ ಎಂಜಿನಿಯರ್ ಗಣಪತಿ ಮೊದಲಾದವರು ಉಪಸ್ಥಿತರಿದ್ದರು.