×
Ad

ಕುಸ್ತಿಗೆ ಮಹಿಳೆಯರ ಪ್ರವೇಶ ಶ್ಲಾಘನೀಯ: ಕೃಪಾ ಆಳ್ವ

Update: 2017-03-26 18:40 IST

ಮಂಗಳೂರು, ಮಾ.26: ಮಹಿಳೆಯರು ಎಲ್ಲ ವಿಚಾರದಲ್ಲೂ ಪುರುಷರಿಗೆ ಸಮಾನರಾಗಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರು ಅದರಲ್ಲಿಯೂ ಯುವ ಜನಾಂಗದ ಜವಾಬ್ದಾರಿ ಅಪಾರವಾಗಿದೆ. ಪುರುಷರಿಗೆ ಸೀಮಿತವಾಗಿದ್ದ ಕುಸ್ತಿ ಪಂದ್ಯದಲ್ಲಿ ಇಂದು ಮಹಿಳೆಯರು ಪಳಗಿರುವುದು ಬಹಳ ಸಂತಸದ ವಿಚಾರ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಹೇಳಿದರು.

ಜನನಿ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ನಡೆದ ಮಹಿಳಾ ಮುಕ್ತ ಕುಸ್ತಿ ಪಂದ್ಯ (ವನಿತೆಯರ ಝೇಂಕಾರ) ಉದ್ಘಾಟಿಸಿ ಅವರು ಮಾತನಾಡಿದರು.

ಮಾರ್ಚ್ 8 ಮಾತ್ರ ಮಹಿಳಾ ದಿನವಲ್ಲ. ಎಲ್ಲ ದಿನಗಳು ಕೂಡ ಮಹಿಳಾ ದಿನವಾಗಿದೆ. ಮಹಿಳೆಯರು ಇಲ್ಲದಿದ್ದರೆ ಮನೆ ಮಾತ್ರವಲ್ಲ ಸಮಾಜ ಕೂಡ ನಡೆಯುವುದಿಲ್ಲ ಎಂದ ಅವರು, ಒಲಿಂಪಿಕ್ಸ್‌ನಲ್ಲಿ ಮಹಿಳೆಯರೇ ದೇಶಕ್ಕೆ ಗೌರವ ತಂದು ಕೊಟ್ಟಿದ್ದಾರೆ. ಸಾಕ್ಷಿ ಮಲ್ಲಿಕ್ ಕುಸ್ತಿಯಲ್ಲಿ ಕಂಚು ಗೆದ್ದಿದ್ದಾರೆ. ಗೀತಾ ಕೆ. ಉಚ್ಚಿಲ್ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಸಾಧನೆಗೈದಿದ್ದಾರೆ ಎಂದು ಶ್ಲಾಸಿದರು.

 ದ.ಕ. ಜಿಲ್ಲಾ ಅಮೆಚೂರ್ ಕುಸ್ತಿ ಸಂಘದ ಮಾಜಿ ಅಧ್ಯಕ್ಷ ಸುಖ್‌ಪಾಲ್ ಸಾಲ್ಯಾನ್, ಟ್ರಸ್ಟ್‌ನ ಸ್ಥಾಪಕಾಧ್ಯಕ್ಷೆ ಗೀತಾ ಕೆ. ಉಚ್ಚಿಲ್, ಉಪಾಧ್ಯಕ್ಷೆ ಶರ್ಮಿಳಾ ದಿಲೀಪ್, ಪ್ರಧಾನ ಕಾರ್ಯದರ್ಶಿ ಸುಮತಿ ಹೆಗ್ಡೆ, ರಾಜ್‌ಮೋಹನ್ ಮುದ್ಯ ಉಪಸ್ಥಿತರಿದ್ದರು.

6 ವಿಭಾಗದಲ್ಲಿ ಸ್ಪರ್ಧೆ:

ನಗರದ ಗೋಕರ್ಣನಾಥೇಶ್ವರ ಕಾಲೇಜಿನ ಶರಣ್ಯಾ ಹಾಗೂ ಕಾರ್ಕಳ ಎಸ್‌ಡಬ್ಲ್ಯುವಿಸಿ ವಿದ್ಯಾರ್ಥಿ ಪೂಜಾ ನಡುವೆ ಮೊದಲ ಪಂದ್ಯ ನಡೆಯಿತು. 40, 45, 50, 55, 60, 65 ಹಾಗೂ 75 ಕೆಜಿ ಮೇಲ್ಪಟ್ಟ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸುಮಾರು 60 ಮಂದಿ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News