ನೋಟು ರದ್ಧತಿಯಿಂದ 35ಲಕ್ಷ ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಇಲ್ಲ: ಮಹಾಂತೇಶ
ಉಡುಪಿ, ಮಾ.26: ಕೇಂದ್ರ ಸರಕಾರದ ನೋಟು ರದ್ಧತಿಯ ಕ್ರಮದಿಂದ ಈವರೆಗೆ ದೇಶದಲ್ಲಿ 35ಲಕ್ಷ ಮಂದಿ ಕಟ್ಟಡ ಕಾರ್ಮಿಕರು ಕೆಲಸ ಕಳೆದು ಕೊಂಡಿದ್ದಾರೆ. ಇದರಿಂದ ಶ್ರೀಮಂತರಿಗೆ ಅನುಕೂಲವಾಗಿದೆಯೇ ಹೊರತು ಬಡವರಿಗಲ್ಲ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ಹಾಗೂ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದ್ದಾರೆ.
ಉಡುಪಿ ಸಾಯಿ ರೆಸಿಡೆನ್ಸಿ ಸಭಾಂಗಣದಲ್ಲಿ ರವಿವಾರ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ದ ಹೊಸ ಕಚೇರಿಯ ಉದ್ಘಾಟನಾ ಸಮಾರಂಭ ಮತ್ತು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ದೇಶದ ಬ್ಯಾಂಕಿಗಳಲ್ಲಿದ್ದ ಒಟ್ಟು 16.5ಲಕ್ಷ ಕೋಟಿ ರೂ. ಹಣದಲ್ಲಿ 11.5 ಲಕ್ಷ ಕೋಟಿ ರೂ. ಹಣವನ್ನು ಶ್ರೀಮಂತರು ಸಾಲದ ರೂಪದಲ್ಲಿ ಪಡೆದು ಕೊಂಡಿದ್ದಾರೆ. ಇವರು ಅದನ್ನು ವಾಪಾಸು ಪಾವತಿಸದೆ ಬ್ಯಾಂಕ್‌ಗಳ ಹಣ ವನ್ನು ಲೂಟಿ ಮಾಡಿದ್ದಾರೆ. ಅದನ್ನು ಸರಿದೂಗಿಸಲು ಕೇಂದ್ರ ಸರಕಾರ ನೋಟು ರದ್ದು ಮಾಡಿ ಬಡವರ ಹಣವನ್ನು ಸುಲಿಗೆ ಮಾಡಿದೆ. ಈ ರಾಜ ಕೀಯವನ್ನು ಕಾರ್ಮಿಕರು ಅರ್ಥ ಮಾಡಿಕೊಳ್ಳಬೇಕು ಎಂದರು.
1996ರಲ್ಲಿ ಸ್ಥಾಪನೆಗೊಂಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೆಸ್ ಮೂಲಕ ಈವರೆಗೆ ಒಟ್ಟು 5400ಕೋಟಿ ರೂ. ಸಂಗ್ರಹವಾಗಿದ್ದು, ಅದರಲ್ಲಿ ಕಳೆದ 10ವರ್ಷಗಳಲ್ಲಿ ವ್ಯಯ ಮಾಡಿರುವುದು ಕೇವಲ 93ಕೋಟಿ ರೂ. ಮಾತ್ರ. ಅದರಲ್ಲೂ ಕಾರ್ಮಿಕರ ಕಲ್ಯಾಣಕ್ಕಾಗಿ 33ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. ಉಳಿದ ಹಣವನ್ನು ಕಚೇರಿ, ಕಟ್ಟಡ ನಿರ್ಮಾಣ, ಜಮೀನು ಖರೀದಿಗೆ ವ್ಯಯ ಮಾಡಲಾಗಿದೆ. ಪ್ರಸ್ತುತ ಕಲ್ಯಾಣ ಮಂಡಳಿ ಯಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಇರುವ ಹಣವನ್ನು ಅನುಷ್ಠಾನ ಗೊಳಿಸಲು ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಅವರು ಟೀಕಿಸಿದರು.
ಕಟ್ಟಡ ಕಾರ್ಮಿಕರು ತಮ್ಮ ಸೌಲಭ್ಯಕ್ಕಾಗಿ ಹೋರಾಟ ನಡೆಸುವುದರ ಜೊತೆಗೆ ಸರಕಾರದ ನೀತಿಯ ವಿರುದ್ಧವೂ ಬೀದಿಗೆ ಇಳಿಯಬೇಕು. ಕಟ್ಟಡ ಕಾರ್ಮಿಕರಿಗೆ ಈಗ ನೀಡುವ 1000ರೂ. ಪಿಂಚಣಿಯನ್ನು 3000 ರೂ.ಗೆ ಏರಿಕೆ ಮಾಡಬೇಕೆಂಬ ಬೇಡಿಕೆಯನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ಸಲ್ಲಿಕೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ ಜಾರಿ ಮಾಡಲು ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದರು.
ಸಂಘದ ಕಚೇರಿಯನ್ನು ಉಡುಪಿ ತಾಲೂಕು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಸ್ಥಾಪಕಾಧ್ಯಕ್ಷ ರಾಮ ಪೂಜಾರಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಶೇಖರ ಬಂಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ಸಿಐ ಟಿಯು ಮುಖಂಡರಾದ ಸುರೇಶ್ ಕಲ್ಲಾಗರ್, ವೆಂಕಟೇಶ್ ಕೋಣಿ, ಉಮೇಶ್ ಕುಂದರ್ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ವಿಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
5ವರ್ಷಗಳಲ್ಲಿ 195 ಕಟ್ಟಡ ಕಾರ್ಮಿಕರು ಮೃತ್ಯು:
ರಾಜ್ಯ ಸರಕಾರದ ಕಾರ್ಮಿಕ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ 2013ರಿಂದ ಕಳೆದ ಐದು ವರ್ಷಗಳಲ್ಲಿ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 185 ಅವಘಡಗಳು ಸಂಭವಿಸಿದ್ದು, ಅದರಲ್ಲಿ 195 ಕಟ್ಟಡ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ತಿಳಿಸಿದರು.
ದೇಶದಲ್ಲಿ ಒಟ್ಟು 3ಕೋಟಿ ಕಟ್ಟಡ ಕಾರ್ಮಿಕರಿದ್ದು, ಕೆಲಸದ ವೇಳೆ ಅವರಿಗೆ ಯಾವುದೇ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ ವಹಿಸು ತ್ತಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಸಾಯುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವಾಗಿದೆ ಎಂದು ಅವರು ದೂರಿದರು.