×
Ad

ಆಸ್ಟ್ರೇಲಿಯಾದಲ್ಲಿ ಭಾರತೀಯ ಡ್ರೈವರ್ ಮೇಲೆ ಹಲ್ಲೆ

Update: 2017-03-26 20:03 IST

ತಾಸ್ಮೇನಿಯಾ, ಮಾ.26: ಭಾರತೀಯ ಟ್ಯಾಕ್ಸಿ ಡ್ರೈವರ್ ಮೇಲೆ ಹೊಬರ್ಟ್‌ನಲ್ಲಿ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು , ಇದು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಹಲ್ಲೆ ಎಂದು ಶಂಕಿಸಲಾಗಿದೆ.

ತಾಸ್ಮೇನಿಯಾದಲ್ಲಿ ಡ್ರೈವರ್ ವೃತ್ತಿಯಲ್ಲಿರುವ ಕೇರಳದ ಕೊಟ್ಟಾಯಂ ಮೂಲದ ಲಿ ಮ್ಯಾಕ್ಸ್ ಎಂಬವರ ಮೇಲೆ ಭಾನುವಾರ ಮುಂಜಾವಿನ ವೇಳೆ ಹಲ್ಲೆ ನಡೆದಿದ್ದು ಮುಖ ಮತ್ತು ಎದೆ ಭಾಗದಲ್ಲಿ ಗಂಭೀರ ಗಾಯಗೊಂಡಿರುವ ಮ್ಯಾಕ್ಸ್‌ರನ್ನು ರಾಯಲ್ ಹೊಬರ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೆಕ್‌ಡೊನಾಲ್ಡ್ ಮಾರಾಟ ಕೇಂದ್ರವೊಂದರ ಬಳಿ ಕಾರು ನಿಲ್ಲಿಸಿದ್ದೆ. ಆ ವೇಳೆ ಮೂವರು ಯುವಕರು ಅಂಗಡಿಯ ಸಿಬ್ಬಂದಿಯೋರ್ವರ ಜೊತೆ ವಾಗ್ವಾದದಲ್ಲಿ ತೊಡಗಿದ್ದರು. ವಿನಾಕಾರಣ ಅವರು ತನ್ನ ವಿರುದ್ಧ ತಿರುಗಿ ಬಿದ್ದರು . ಇವರಲ್ಲಿ ಕಪ್ಪು ಬಣ್ಣದ ಟೀಶರ್ಟ್ ತೊಟ್ಟಿದ್ದ ದೃಢಕಾಯದ ಯುವಕನೋರ್ವ ಜನಾಂಗೀಯ ನಿಂದನೆ ಮಾಡುತ್ತಾ ನನ್ನ ಮೇಲೆ ಹಲ್ಲೆ ನಡೆಸಿದ. ಕೂಡಲೇ ಉಳಿದಿಬ್ಬರೂ ಆತನ ಜೊತೆ ಸೇರಿಕೊಂಡು ಹಲ್ಲೆ ನಡೆಸಿದರು. ರಕ್ತ ಸುರಿಯುತ್ತಿದ್ದ ಗಾಯದ ಮೇಲೆ ನೀರೆರಚಿ ಅಲ್ಲಿಂದ ತೆರಳಿದರು ಎಂದು ಮ್ಯಾಕ್ಸ್ ಮಲಯಾಳಂ ಸುದ್ದಿ ಚಾನೆಲ್ ಒಂದಕ್ಕೆ ತಿಳಿಸಿದ್ದಾರೆ.

 ಕಳೆದ ಎಂಟು ವರ್ಷಗಳಿಂದ ಹೊಬರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು ಇದೇ ಮೊದಲ ಬಾರಿಗೆ ಇಂಥಹ ಕೆಟ್ಟ ಅನುಭವವಾಗಿದೆ . ಹಲ್ಲೆ ನಡೆಸುವಾಗ ಅತ್ಯಂತ ಕೆಟ್ಟದಾಗಿ ಜನಾಂಗೀಯ ನಿಂದನೆಯ ಪದ ಬಳಸಿದರು. ನನ್ನ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯಲು ಯಾರೊಬ್ಬರೂ ಮುಂದಾಗಲಿಲ್ಲ. ಮನಸೋ ಇಚ್ಛೆ ಥಳಿಸಿದ ಬಳಿಕ ಅವರು ವಾಹನವೊಂದರಲ್ಲಿ ತೆರಳಿದರು ಎಂದು ಮ್ಯಾಕ್ಸ್ ತಿಳಿಸಿದ್ದಾರೆ.

 ಆಸ್ಟ್ರೇಲಿಯಾದಲ್ಲಿ ಜನಾಂಗ ಮನೋಭಾವ ಕ್ರಮೇಣ ಬದಲಾಗುತ್ತಿದೆ. ಇದನ್ನು ‘ಟ್ರಂಪ್’ ಪರಿಣಾಮ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಆದರೆ ಈ ಯುವಕರು ಯಾವ ಪ್ರಚೋದನೆಯಿಂದ ಹೀಗೆ ವರ್ತಿಸಿದರು ಎಂದು ತಿಳಿಯುತ್ತಿಲ್ಲ ಎಂದು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸುತ್ತಾರೆ ಮ್ಯಾಕ್ಸ್. ಇದು ಕಳೆದೊಂದು ವಾರದಲ್ಲಿ ನಡೆಯುತ್ತಿರುವ ಎರಡನೇ ಜನಾಂಗೀಯ ಹಲ್ಲೆಯ ಘಟನೆಯಾಗಿದೆ. ಕಳೆದ ರವಿವಾರ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಟೋಮಿ ಕಳತೂರ್ ಎಂಬ ಕೇರಳದ ಪಾದ್ರಿಯೋರ್ವರನ್ನು ಮೆಲ್ಬೋರ್ನ್‌ನ ಚರ್ಚ್‌ನ ಒಳಗಡೆ ಇರಿಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News