ಪಡುಕೆರೆ ಬೀಚ್ ಅಭಿವೃದ್ಧಿಗೆ ನೀಲನಕಾಶೆ
ಉಡುಪಿ, ಮಾ.26: ಬಹುಕಾಲದ ಬೇಡಿಕೆಯಾದ ಮಲ್ಪೆ-ಪಡುಕೆರೆ ಸೇತುವೆ 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಸಂಚಾರಕ್ಕೆ ಮುಕ್ತಗೊಂಡ ಬೆನ್ನಲ್ಲೇ, ಈವರೆಗೆ ಹೊರಜಗತ್ತಿಗೆ ಕಣ್ಣಿಗೆ ಬೀಳದೇ ಮರೆಯಾಗಿದ್ದ ಪಡುಕೆರೆಯ ಶುಭ್ರ ಹಾಗೂ ರಮಣೀಯ ಸೌಂದರ್ಯದ ಬೀಚ್ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜುಗೊಳ್ಳುತ್ತಿದೆ.
ಪಡುಕೆರೆ ಎಂಬ ದ್ವೀಪದಂತಿದ್ದ ಅಜ್ಞಾತ ಪುಟ್ಟ ಊರನ್ನು ಭಾರತದ ಪ್ರವಾಸೋದ್ಯಮ ಭೂಪಟದಲ್ಲಿ ಸೇರಿಸಲು ಉತ್ಸುಕವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ನಗರಸಭೆ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳೊಂದಿಗೆ ಪಡುಕೆರೆಗೆ ಭೇಟಿ ನೀಡಿ ಈ ಊರನ್ನು ಮಲ್ಪೆಯೊಂದಿಗೆ ಪ್ರವಾಸೋದ್ಯಮ ತಾಣವಾಗಿ ಗುರುತಿಸುವ ಬಗ್ಗೆ ಕೈಗೊಳ್ಳಬೇಕಾದ ಕ್ರಮದ ಕುರಿತು ವಿವರವಾಗಿ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್, ವಾಣಿಜ್ಯೀಕರಣ ಗೊಳಿಸದೇ ಪಡುಕೆರೆಯಲ್ಲಿ ಪ್ರವಾಸಿಗರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಈ ಸಹಜ ಸೌಂದರ್ಯದ ಬೀಚ್‌ನ್ನು ವಿಶ್ವ ಪ್ರಸಿದ್ದ ಬೀಚ್ ಅಗಿ ಆಭಿವೃದ್ದಿಗೊಳಿಸಲು ಬೇಕಾದ ಯೋಜನೆಯನ್ನು ರೂಪಿಸಲಾ ಗುವುದು ಎಂದರು.
ಮಲ್ಪೆ- ಪಡುಕರೆ ಸೇತುವೆಯ ಉದ್ಘಾಟನೆಯೊಂದಿಗೆ ಇದೀಗ ಪಡುಕೆರೆಗೆ ಸುಲಭದಲ್ಲಿ ನೇರ ಸಂಪರ್ಕ ಸಾಧ್ಯವಾಗಿದ್ದು, ಪಡುಕೆರೆ ಬೀಚ್‌ನ್ನು ಮಲ್ಪೆ ಬೀಚ್ ಅಭಿವೃದಿ ಸಮಿತಿಯ ಸುಪರ್ದಿಗೆ ಒಪ್ಪಿಸಿ, ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ಸಮಿತಿಯು ಬೀಚ್ ಕ್ಲೀನಿಂಗ್ ಯಂತ್ರವನ್ನು ಹೊಂದಿರುವುದರಿಂದ ಬೀಚ್‌ನ ಸ್ವಚ್ಛತೆ ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಇಲ್ಲಿ ಬೀಚ್‌ಗೆ ಸಮಾನಾಂತರವಾಗಿ ರಸ್ತೆಯನ್ನು ನಿರ್ಮಿಸಲಾಗುವುದು. ಆದರೆ ಇದರಿಂದ ಸ್ಥಳೀಯರಿಗೆ ಯಾವುದೇ ರೀತಿಯ ಅನಾನುಕೂಲತೆ, ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಬೀಚ್‌ನಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ, ಸ್ನಾನಗೃಹಗಳ ನಿರ್ಮಾಣ, ವಿಶ್ರಾಂತಿಧಾಮ ಹಾಗೂ ಉಪಹಾರಗೃಹಗಳನ್ನು ನಿರ್ಮಿಸಿ ಪ್ರವಾಸೋದ್ಯಮದ ಬೆಳವಣಿಗೆಗೆ ಬೇಕಾದ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದರು.
ಅಲ್ಲದೇ ಪಡುಕೆರೆಯಲ್ಲಿ ಪ್ರವಾಸಿಗರಿಗಾಗಿ ಹೋಮ್‌ಸ್ಟೇಗಳನ್ನು ಆರಂಭಿಸುವ ಉದ್ದೇಶವಿದ್ದು, ಇದಕ್ಕಾಗಿ ಸ್ಥಳೀಯರ ನೆರವನ್ನು ಪಡೆಯಲಾಗುವುದು. ಸ್ಥಳೀಯರು ತಮ್ಮ ಮನೆಯಲ್ಲೇ ಈ ವ್ಯವಸ್ಥೆಯನ್ನು ಆರಂಭಿಸಲು ಬೇಕಾದ ನೆರವು, ಪ್ರೋತ್ಸಾಹ ನೀಡಲಾಗುವುದು. ಸ್ಥಳೀಯರ ಮೂಲಕ ಸೀಪುಡ್ ವೈವಿಧ್ಯತೆಯನ್ನು ಪ್ರವಾಸಿಗರಿಗೆ ಪರಿಚಯಿಸಲು ಅವಕಾಶವಿದೆ. ಒಟ್ಟಿನಲ್ಲಿ ರಾಜ್ಯದ 3 ಕರಾವಳಿ ಜಿಲ್ಲೆಗಳಿಗೆ ಮಾದರಿಯಾದ ಹೋಮ್‌ಸ್ಟೇ ವ್ಯವಸ್ಥೆಯನ್ನು ಇಲ್ಲಿ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು.ಇದರಿಂದ ಸ್ಥಳೀಯರಿಗೆ ಉತ್ತಮ ಆದಾಯ ಗಳಿಸುವ ಅವಕಾಶವಿದೆ ಎಂದು ಪ್ರಮೋದ್ ನುಡಿದರು.
ಇನ್ನು ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ.ಗಳ ಪ್ರಸ್ತಾಪವನ್ನು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಕಳುಹಿಸಲಾಗುವುದು. ಮಲ್ಪೆ ಅಭಿವೃದ್ಧಿ ಸಮಿತಿ ಇರುವ ಒಂದು ಕೋಟಿ ರೂ.ವನ್ನು ಇದಕ್ಕೆ ಬಳಸಲಾಗುವುದು. ನಮ್ಮ ಪ್ರಯತ್ನಕ್ಕೆ ಸ್ಥಳೀಯರು ಕೈಜೋಡಿಸಬೇಕೆಂದು ಕೋರಿದ ಸಚಿವರು, ಪಡುಕೆರೆ ಸ್ಥಳೀಯರ ಅಭಿವೃದ್ಧಿಗೆ ಪೂರಕವಾಗಿ ಎಲ್ಲವನ್ನೂ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯರಾದ ಜನಾರ್ಧನ ಭಂಡಾರ್‌ಕರ್, ರಮೇಶ್ ಕಾಂಚನ್, ತಹಶೀಲ್ದಾರ್ ಮಹೇಶ್ಚಂದ್ರ, ಪೌರಾಯುಕ್ತ ಡಿ.ಮಂಜುನಾಥಯ್ಯ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.