ಡಿಸೆಂಬರ್ ಕೊನೆಗೆ ಪರಾರಿ ಸೇತುವೆ ಪೂರ್ಣ: ಪ್ರಮೋದ್
ಉಡುಪಿ, ಮಾ.26: ತಾಲೂಕಿನ ಉಪ್ಪೂರು ಗ್ರಾಪಂ ವ್ಯಾಪ್ತಿ ಅಮ್ಮುಂಜೆ ಹಾಗೂ ಮಣಿಪಾಲದ ಶೀಂಬ್ರವನ್ನು ಸಂಪರ್ಕಿಸುವ ಸ್ವರ್ಣಾ ನದಿಗೆ ಅಡ್ಡಲಾಗಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪರಾರಿ ಸೇತುವೆ ಕಾಮಗಾರಿ ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, ದಾಖಲೆಯ ಅವಧಿಯಲ್ಲಿ ಪೂರ್ಣಗೊಂಡು ಮುಂದಿನ ಡಿಸೆಂಬರ್ ಕೊನೆಯ ವೇಳೆಗೆ ಉದ್ಘಾಟನೆಗೆ ಸಜ್ಜುಗೊಳ್ಳಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ರವಿವಾರ ಪರಾರಿ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿ, ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು.
ತಾನು ಶಾಸಕನಾದ ಬಳಿಕ ಉಡುಪಿಯಲ್ಲಿ ಸೇತುವೆಗಳ ಕಾಮಗಾರಿಗಾಗಿ ದಾಖಲೆಯ 77.50 ಕೋಟಿ ರೂ. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಬಂದಿದೆ. ಬಹುತೇಕ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಈ ಪರಾರಿ ಸೇತುವೆ ಪೂರ್ಣಗೊಂಡಲ್ಲಿ ಮಂದಾರ್ತಿ, ಬಾರಕೂರು, ಚೇರ್ಕಾಡಿ ಆ ಕಡೆಯ ಜನರು ಮಣಿಪಾಲಕ್ಕೆ 15ರಿಂದ 30 ನಿಮಿಷಗಳಲ್ಲಿ ತಲುಪಬಹುದಾಗಿದೆ ಎಂದರು.
ಪರಾರಿ ಸೇತುವೆ ಕಾಮಗಾರಿ ಶೇ.40ರಷ್ಟು ಮುಗಿದಿದ್ದು, ಈಗಾಗಲೇ ಗುತ್ತಿಗೆದಾರರಿಗೆ ಶೇ.35ರಷ್ಟು ಹಣವನ್ನು ಪಾವತಿಸಲಾಗಿದೆ. ಕಾಮಗಾರಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಸೇತುವೆಯ ಉದ್ದ 202.96 ಮೀ ಗಳಾಗಿದ್ದು ತಲಾ 23.37ಮೀ.ನ ಎಂಟು ಅಂಕಣಗಳನ್ನು ಹೊಂದಿದೆ. ಸೇತುವೆ ಅಗಲ 7.50 ಮೀಗಳು ಎಂದವರು ವಿವರಿಸಿದರು.
ಈ ಸೇತುವೆಗೆ ಎರಡು ಬದಿಗಳಲ್ಲಿ ಕೂಡು ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನದ ಅಗತ್ಯವಿದ್ದು, ಒಂದು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮಣಿಪಾಲ ಕಡೆಗೆ 180ಮೀ. ಉದ್ದ, 5.50 ಮೀ.ಅಗಲದ ಹಾಗೂ ಕೊಳಲಗಿರಿ ಕಡೆಗೆ 393 ಮೀ. ಉದ್ದ, 5.50ಮೀ. ಅಗಲದ ಕೂಡು ಸೇತುವೆ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಪರಾರಿ ಬದಿಯಿಂದ 3.16 ಎಕರೆ, ಶೀಂಬ್ರ ಕಡೆಯಿಂದ 1.36 ಎಕರೆ ಜಾಗ ಭೂಸ್ವಾದೀನವಾಗಬೇಕು ಎಂದರು.
ಸೇತುವೆಗೆ 74 ಪೈಲ್‌ಪೌಂಡೇಶನ್ ಪೂರ್ಣಗೊಂಡಿದೆ. ಇದು 45ಮೀ. ನೀರಿನೊಳಗೆ ಹಾಗೂ ಒಂದು ಮೀ. ಬಂಡೆಯೊಳಗಿದೆ. ಹೀಗಾಗಿ ಸೇತುವೆ ಗಟ್ಟಿಮುಟ್ಟಾಗಿ ಇರಲಿದೆ. ಕಾಲಮಿತಿಯೊಳಗೆ ಸೇತುವೆ ಜನರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಚುನಾವಣೆಗೆ ಮುನ್ನ ತಾವು ಬಿಡುಗಡೆ ಮಾಡಿದ್ದ ಱವಿಷನ್ 2025ೞರಲ್ಲಿ ತಿಳಿಸಿದ್ದ ಬಹುತೇಕ ಕಾರ್ಯಗಳು 2018ರೊಳಗೆ ಪೂರ್ಣಗೊಳ್ಳಲಿವೆ ಎಂದು ಪ್ರಮೋದ್ ತಿಳಿಸಿದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಪೌರಾಯುಕ್ತ ಮಂಜುನಾಥಯ್ಯ, ಜನಾರ್ದನ ಭಂಡಾರ್‌ಕರ್,ರಮೇಶ್ ಕಾಂಚನ್,ಪಿಡಬ್ಲು ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಡಿ.ವಿ.ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.