ಮೂಡುಬಿದಿರೆಯ ಭಗವಾನ್ ಬಾಹುಬಲಿಗೆ 61 ವರ್ಷಗಳ ಬಳಿಕ ಮಸ್ತಕಾಭಿಷೇಕ
ಮೂಡಬಿದಿರೆ, ಮಾ. 25: ಸೇವಾದಾರರೊಬ್ಬರ ಸೇವೆಯ ನಿಮಿತ್ತ ಶ್ರೀ ಜೈನಮಠದ ಆಡಳಿತಕ್ಕೊಳಪಟ್ಟಿರುವ ಸಾವಿರ ಕಂಬದ ಬಸದಿಯ ಮುಖ್ಯ ಆರಾಧನಾ ಮೂರ್ತಿ ಚಂದ್ರನಾಥ ಸ್ವಾಮಿಯ ಸನ್ನಿಧಿಯಲ್ಲಿರುವ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಗೆ ಬರೊಬ್ಬರಿ 61 ವರ್ಷಗಳ ಬಳಿಕ ಮಸ್ತಕಾಭಿಷೇಕ ಶುಕ್ರವಾರ ನಡೆಯಿತು.
ಮಹಾಮಸ್ತಕಾಭಿಷೇಕ ಸಂದರ್ಭ ಬಳಸಲಾಗುವ ಎಲ್ಲ ದ್ರವ್ಯಗಳನ್ನು ಈ ಮಸ್ತಕಾಭಿಷೇಕದಲ್ಲೂ ಬಳಸಲಾಗಿದ್ದು, ವೀಕ್ಷಕರಿಗೆ ಮಹಾಮಸ್ತಕಾಭಿಷೇಕದ ಸಣ್ಣಸ್ವರೂಪವನ್ನು ನೋಡಿದ ಅನುಭವ ದೊರಕಿತು. ಹಾಲುಬೆಳ್ಳಿಯಿಂದ ನಿರ್ಮಿತವಾಗಿರುವ ಈ ಬಾಹುಬಲಿ ಮೂರ್ತಿಯು 3 ಅಡಿ ಎತ್ತರವಿದ್ದು, ಸುಮಾರು 300 ಕೆಜಿ ಭಾರವಿದೆ.
ಶ್ರೀ ಜೈನ ಮಠಾಧೀಶ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ನಡೆದ ಈ ಮಸ್ತಕಾಭಿಷೇಕದಲ್ಲಿ ಮೊದಲಿಗೆ 54 ಕಲಶಗಳಲ್ಲಿ ನೀರಿನ ಅಭಿಷೇಕ ನಡೆದ ಬಳಿಕ ಎಳನೀರು, ಇಕ್ಷುರಸ (ಕಬ್ಬಿನ ಹಾಲು), ಹಾಲು, ನವ ಧಾನ್ಯ , ಹಸುವಿನ ತುಪ್ಪ, ಕಷಾಯ, ಕಲ್ಕಚೂರ್ಣ (ಅಕ್ಕಿ ಹಿಟ್ಟು), ಅರಶಿನ, ಕೇಸರಿ ಹಿಟ್ಟು, ಕೇಸರಿ ದ್ರವ ಮತ್ತು ಚತುಷ್ಕೋಣ ಕಲಶಾಭಿಷೇಕ, ಭತ್ತದ ಅರಳು, ಶ್ರೀಗಂಧ, ಚಂದನ ಇಂಥ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು.
ಸೇವೆದಾರರಾದ ದಿವಂಗತ ಆರೋಹ ಆದಿರಾಜರ ಪುತ್ರರಾದ ನಾಗೇಂದ್ರ ಕುಮಾರ್, ಶೈಲೇಂದ್ರ ಕುಮಾರ್, ಪುತ್ರಿಯರು, ಕುಟುಂಬಸ್ಥರು ಹಾಗೂ ಪರಿವಾರದವರು ಮಸ್ತಕಾಭಿಷೇಕದ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು.