ನನ್ನ ಸಿದ್ಧಾಂತಗಳೊಂದಿಗೆ ಎಂದೂ ರಾಜಿಮಾಡಿಕೊಂಡಿಲ್ಲ: ಅಡ್ವಾಣಿ
ಮೌಂಟ್ ಅಬು,ಮಾ.26: ತನ್ನ ಸಿದ್ಧಾಂತಗಳೊಂದಿಗೆ ತಾನು ಎಂದೂ ರಾಜಿಮಾಡಿಕೊಂಡಿಲ್ಲವೆಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಇಂದಿಲ್ಲಿ ಹೇಳಿದ್ದು, ಯಾವುದೇ ತಪ್ಪು ಕೆಲಸಕ್ಕೆ ಪ್ರೋತ್ಸಾಹ ನೀಡಬಾರದೆಂಬ ಪಾಠವನ್ನು ತಾನು ಆರೆಸ್ಸೆಸ್‌ನಿಂದ ಕಲಿತಿರುವುದಾಗಿ ತಿಳಿಸಿದ್ದಾನೆ.
ರಾಜಸ್ಥಾನದ ಮೌಂಟ್ ಅಬುನಲ್ಲಿ ರವಿವಾರ ನಡೆದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ 80ನೆ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ಯಾರಾದರೂ ತಪ್ಪು ಕೆಲಸದಲ್ಲಿ ತೊಡಗಿದಲ್ಲಿ ನಾವು ಅದಕ್ಕೆ ಪ್ರೋತ್ಸಾಹ ನೀಡಬಾರದು. ನಾನು ನಂಬಿಕೊಂಡು ಬಂದ ಇಂತಹ ಹಲವಾರು ಸಣ್ಣಪುಟ್ಟ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರಿಂದಲೇ ಸಮಾಜಕ್ಕಾಗಿ ಸೇವೆ ಸಲ್ಲಿಸಲು ನನಗೆ ಸಾಧ್ಯವಾಯಿತು ಎಂದರು.ಆರೆಸ್ಸೆಸ್ ಬಿಜೆಪಿಯ ಸೈದ್ಧಾಂತಿಕ ಪೋಷಕನೆಂದು ಅವರು ಬಣ್ಣಿಸಿದ ಅವರು ನನ್ನ ಜೀವನದಲ್ಲಿ ಹಾಗೂ ನಡತೆಯಲ್ಲಿ ಯಾವತ್ತಿಗೂ ನನ್ನ ನಂಬಿಕೊಂಡು ಬಂದ ಸಿದ್ಧಾಂತಗಳ ಜೊತೆ ರಾಜಿಮಾಡಿಕೊಂಡಿಲ್ಲ’’ವೆಂದು ಹೇಳಿದರು.
ಭಾರತ ವಿಭಜನೆಗೆ ಮೊದಲು ಬ್ರಹ್ಮಕುಮಾರಿ ಸಂಸ್ಥೆಯು ಕರಾಚಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗಲೇ ಅದರ ಬೆಳವಣಿಗೆಯನ್ನು ಗಮನಿಸುತ್ತಾ ಬಂದಿರುವುದಾಗಿ 89 ವರ್ಷ ವಯಸ್ಸಿನ ಅಡ್ವಾಣಿ ತಿಳಿಸಿದರು. ಜಗತ್ತಿಗೆ ಬ್ರಹ್ಮಕುಮಾರಿಯರು ನೈತಿಕ ಮಾರ್ಗದರ್ಶನದ ಮೂಲವಾಗಿದ್ದಾರೆ ಹಾಗೂ ಅವರಿಂದ ಜನತೆ ಶಿಸ್ತು ಹಾಗೂ ಪ್ರಾಮಾಣಿಕತೆಯನ್ನು ಕಲಿಯಬೇಕಾಗಿದೆ ಎಂದರು. ನಿಮ್ಮ ಸ್ವಭಾವದೊಂದಿಗೆ ರಾಜಿಮಾಳ್ಳದಿರಿ. ನಿಮ್ಮ ಸ್ವಭಾವ ಶಿಥಿಲಗೊಳ್ಳಲು ಬಿಡದಿರಿ’’ ಎಂದು ಅಡ್ವಾಣಿ ಯುವಜನಾಂಗಕ್ಕೆ ಕಿವಿಮಾತು ಹೇಳಿದರು.