​ಹೆಣ್ಮಕ್ಕಳ ಕೌಶಲ್ಯಗಳಿವೆ ಮಾನ್ಯತೆ ಸಿಗುತ್ತಿಲ್ಲ: ಡಾ.ಸಬಿಹಾ ಭೂಮಿಗೌಡ

Update: 2017-03-26 15:56 GMT

ಮಂಗಳೂರು, ಮಾ. 26: ಮಹಿಳೆಯರ ಅರಿವು ಮತ್ತು ಕೌಶಲ್ಯಗಳಿಗೆ ಮಾನ್ಯತೆ ದೊರೆಯದಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಸಬಿಹಾ ಭೂಮಿಗೌಡ, ಜ್ಞಾನದ ವಲಯದಲ್ಲಿ ಶೈಕ್ಷಣಿಕ ಮಾನ್ಯತೆ ಸಿಗುವಂತಾಗಬೇಕು ಎಂದು ಹೇಳಿದ್ದಾರೆ.

ಕನ್ನಡ ಮತುತಿ ಸಂಸ್ಕೃತಿ ಇಲಾಖೆ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ವತಿಯಿಂದ ನಗರದ ತುಳು ಭವನದಲ್ಲಿ ಎರಡು ದಿನಗಳ ಕಾಲ ನಡೆದ ದ.ಕ. ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೆಣ್ಮಕ್ಕಳ ಬಳಿ ಇರುವ ಕೌಶಲ್ಯಗಳನ್ನು ಅವರು ಇನ್ನೊಬ್ಬರ ಹಿತಕ್ಕಾಗಿ ಪಸರಿಸುತ್ತಲೇ ಬಂದಿದ್ದಾರೆ. ಆಹಾರ ವ್ಯವಸ್ಥೆ ಕೌಶಲಗಳಲ್ಲಿ ಒಂದು. ಅದರೊಳಗೆ ಬಹುದೊಡ್ಡ ಜಗತ್ತಿದೆ. ಆದರೆ ಅದನ್ನು ಶೈಕ್ಷಣಿಕ ವಲಯದ ಜ್ಞಾನ ಅಂತ ಪರಿಗಣಿಸದೆ ಇರುವುದು ವಿಷಾದನೀಯ ಇಂತಹ ಪ್ರವೃತ್ತಿ ಶೈಕ್ಷಣಿಕ ವಲಯದ ಚಿಂತನೆಗೆ ನಷ್ಟವೇ ಹೊರತು ಮಹಿಳೆಯರಿಗಲ್ಲ ಎಂದವರು ನುಡಿದರು.

ಕಟ್ಟುಪಾಡು ವಿಧಿಸಬಾರದು: ರೋಹಿಣಿ

ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಬಿ.ಎಂ. ರೋಹಿಣಿ ಮಾತನಾಡಿ, ಕಾಲ ಬದಲಾದಂತೆ ಹೊಸ ಹೊಸ ವಿಚಾರಗಳನ್ನು ಸಮಾಜ ಸ್ವೀಕರಿಸುತ್ತಲೇ ಬಂದಿದೆ. ಹಾಗೆಯೇ ಮಹಿಳೆಯರಿಗೆ ಅನುಕೂಲಕ್ಕೆ ತಕ್ಕಂತೆ ವಸ್ತ್ರ ಸಂಹಿತೆ ಕೂಡ ಬದಲಾಗಬೇಕು. ಮಹಿಳೆಯರು, ಶಿಕ್ಷಕಿಯರು ಇಂಥದ್ದೇ ಬಟ್ಟೆ ಧರಿಸಬೇಕು ಎನ್ನುವ ಕಟ್ಟುಪಾಡು ವಿಧಿಸಬಾರದು. ಅವರಿಗೆ ಯಾವುದು ಆರಾಮದಾಯಕವಾಗಿದೆಯೋ ಅಂತಹ ಬಟ್ಟೆಯನ್ನು ಧರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮ್ಮೇಳನದ ಅಧ್ಯಕ್ಷೆ, ಹಿರಿಯ ಸಾಹಿತಿ ಬಿ.ಎಂ. ರೋಹಿಣಿ, ಲೇಖಕಿ ಜ್ಯೋತಿ ಚೇಳಾರು ಉಪಸ್ಥಿತರಿದ್ದರು. ಮುಖ್ಯ ಅತಿಥಿ ಲೀಲಾವತಿ ರಾವ್ ಮಾತನಾಡಿದರು.

ಸಾಧಕಿಯರಿಗೆ ಸನ್ಮಾನ:

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಮೂರ್ತಿಶಿಲ್ಪಿ ಮರ್ಲಿನ್ ರಸ್ಕಿನಾ, ಅಂಚೆ ಮಹಿಳೆ ಕುಸುಮಾ ಕುಮಾರಿ, ಕಸ ವಿಲೇವಾರಿ ಕೆಲಸದಲ್ಲಿ ತೊಡಗಿಕೊಂಡಿರುವ ಸುಂದರಿ, ಸೂಲಗಿತ್ತಿ ಬೆಳ್ಳಿಬಾಯಿ, ಆಂಬ್ಯುಲೆನ್ಸ್ ಚಾಲಕಿ ರಾಧಿಕಾ ಅವರನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News