ಹತ್ಯೆ ಯತ್ನ ಪ್ರಕರಣ: ನಾಲ್ವರ ಬಂಧನ
ಮಂಗಳೂರು, ಮಾ. 26: ವ್ಯಕ್ತಿಯೊಬ್ಬನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾಟಿಪಳ್ಳದ ಅಬ್ದುಲ್ ನೌಫಲ್ ಯಾನೆ ಬಶೀರ್(42), ಕುಂಜತ್‌ಬೈಲು ಗ್ರಾಮದ ಅಬ್ದುಲ್ ನಾಸಿರ್ (30) ಪುದು ಗ್ರಾಮದ ಮುಹಮ್ಮದ್ ಶಬೀರ್ (21), ಇಡ್ಯಾದ ಮುಹಮ್ಮದ್ ಶಬ್ಬೀರ್(31) ಎಂದು ಗುರುತಿಸಲಾಗಿದೆ.
2016ರ ಫೆ. 21ರಂದು ಜೋಕಟ್ಟೆ ಕೋಡಿಕೆರೆ ಪ್ರಕಾಶ್ ಪೂಜಾರಿ ಹತ್ಯೆ ಯತ್ನ ನಡೆದಿತ್ತು.
ಪ್ರಕಾಶ್ ಪೂಜಾರಿ ಅವರು ಮಧಾಹ್ನ ಕಳವಾರು ಬಳಿಯ ತನ್ನ ಅಂಗಡಿಯಿಂದ ತನ್ನ ಆ್ಯಕ್ಟಿವಾ ಹೊಂಡಾ ಸ್ಕೂಟರ್‌ನಲ್ಲಿ ಮನೆಗೆ ಊಟಕ್ಕೆ ಬಂದು ವಾಪಾಸು ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಳವಾರಿನ ಅಂಗಡಿಗೆ ತೆರಳಿದ್ದಾಗ ಹಿಂದುಗಡೆಯಿಂದ 2 ಬೈಕ್ ನಲ್ಲಿ ಬಂದ ಆರೋಪಿಗಳು ಪ್ರಕಾಶ್ ಪೂಜಾರಿಯ ಸ್ಕೂಟರ್‌ನ್ನು ಅಡ್ಡಗಟ್ಟಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.
ಈ ಬಗ್ಗೆ ಪ್ರಕಾಶ್ ತಮ್ಮ ಕಿರಣ್ ಎಂಬವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.