×
Ad

ಮಾ.27ರಂದು ‘ಪಿಲಿಪತ್ತಿ ಗಡಸ್ ‘ ತುಳು ನಾಟಕದ 300ನೇ ಪ್ರಯೋಗ !

Update: 2017-03-26 23:02 IST

ಹೆಬ್ರಿ, ಮಾ.26: ತುಳು ರಂಗಭೂಮಿಯಲ್ಲಿ ಹೊಸ ದಾಖಲೆ ನಿರ್ಮಾಣವಾಗುತ್ತಿದೆ. ರಂಗ ನಾಟಕದಲ್ಲಿ ಡಾ.ಡಿ.ಕೆ. ಚೌಟ ರಚಿಸಿದ ಜೀವನ್ರಾಮ್ ಸುಳ್ಯ ನಿರ್ದೇಶನದ, ರಂಗ ನಟ ನಿರ್ದೇಶಕ ಸುಕುಮಾರ್ ಮೋಹನ್ ನೇತ್ರತ್ವದ ಹೆಬ್ರಿಯ ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯು ಅಭಿನಯದಲ್ಲಿ ‘ ಪಿಲಿಪತ್ತಿ ಗಡಸ್’ ತುಳು ನಾಟಕ ಯಶಸ್ವಿಯಾಗಿ 300ನೇ ಪ್ರಯೋಗ ಮಾ.27ರಂದು ನಡೆಯಲಿದೆ.

ಖ್ಯಾತ ಸಾಹಿತಿ ಡಾ.ಡಿ.ಕೆ.ಚೌಟ ಅವರ ರಂಗ ಕೃತಿ ಯಾಗಿರುವ ಪಿಲಿಪತ್ತಿ ಗಡಸ್ ತುಳು ಸಂಸ್ಕೃತಿಯನ್ನು ವಿಶಿಷ್ಟವಾಗಿ ಬಿಂಬಿಸಿದೆ. ಮೇಲ್ವರ್ಗದ ದರ್ಪ, ಶೋಷಣೆ, ಗುತ್ತಿನವರ ಬದುಕಿನ ಅವಸ್ಥೆ ಹಾಗೂ ಧರ್ಮಕ್ಕೆ ವಿರುದ್ಧವಾದ ವ್ಯವಸ್ಥೆಯೇ ಬುಡಮೇಲಾಗಿ ಕುಸಿಯುವ ನಿಲುವುಗಳು ನಾಟಕದಲ್ಲಿ ವ್ಯವಸ್ಥಿತವಾಗಿ ಚಿತ್ರಣಗೊಂಡಿದೆ.

ಜೀವನರಾಮ್ ಸುಳ್ಯ ಅವರ ನಿರ್ದೇಶನದಲ್ಲಿ ಹಲವು ವಿಶೇಷತೆಗಳನ್ನು ನಾಟಕ ಮಾಡಿಕೊಂಡಿದೆ. ವೇದಿಕೆಯಲ್ಲಿ ಬೆಂಕಿ ಬರುವುದು, ದೈವದ ಮಂಚ ಕೆಳಗೆ ಬೀಳುವ ಸನ್ನಿವೇಶದ ಸಂದರ್ಭಗಳನ್ನು ಇಂದ್ರಜಾಲದ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಲಾಗಿದೆ.

ಪಿಲಿಪತ್ತಿಗಡಸ್ ನಲ್ಲಿ ಸುಕುಮಾರ್ ಮೋಹನ್ ಹೆಗ್ಗಡೆಯಾಗಿ, ಸುಗಂಧಿ ಉಮೇಶ್ ಕಲ್ಮಾಡಿ ಹೆಗ್ಗಡತಿ ಬ್ಬಕ್ಕನಾಗಿ, ವಾಣಿ ಸುಕುಮಾರ್ ಮೋಹನ್ ಚೆನ್ನಿಯಾಗಿ, ಪೂವಮ್ಮನಾಗಿ ಪೂರ್ಣಿಮಾ ಸುಧೀಂದ್ರ ಮೋಹನ್, ಐತಪ್ಪು ಪಾತ್ರದಾರಿಯಾಗಿ ಸುಧೀಂದ್ರ ಮೋಹನ್, ದಾಸಯ್ಯನಾಗಿ ಸುರೇಂದ್ರ ಮೋಹನ್, ನರೇಶ್ ಮತ್ತು ಉಮೇಶ್ ಕಲ್ಮಾಡಿ ನಟಿಸುತ್ತಿದ್ದಾರೆ. ಕರುಣಾಕರ ಶಿವಪುರ ಹಿನ್ನಲೆ ಸಂಗೀತಾ ನೀಡುತ್ತಿದ್ದಾರೆ. ನಮತುಳುವೆರ್ ಕಲಾ ಸಂಘಟನೆಯ ಹೊಣೆಹೊತ್ತು 299 ಪ್ರದರ್ಶನಗಳ ಸಾಧನೆಯ ಸಾರಥ್ಯ ವಹಿಸಿದವರು ಸಿಜಿಕೆ ಪ್ರಶಸ್ತಿ ಪುರಸ್ಕೃತ ಕಲಾವಿದ ರಂಗ ನಿರ್ದೇಶನ ಸುಕುಮಾರ್ ಮೋಹನ್.

ತುಳು ನಾಟಕಗಳು ಈ ತನಕ ಪಡೆಯದಷ್ಟು ಪ್ರಶಸ್ತಿಯನ್ನು ಪಿಲಿಪತ್ತಿ ಗಡಸ್ ನಾಟಕಕ್ಕೆ ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆ ಪಡೆದುಕೊಂಡಿದೆ. ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ತಂಡಕ್ಕೆ ಸಂದಿದೆ. 

ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ವಿಶ್ವರಂಗ ಭೂಮಿ ದಿನಾಚರಣೆಯ ಪ್ರಯುಕ್ತ ಮಾ.27ರಂದು ಸಂಜೆ 7 ಗಂಟೆಗೆ ಮುದ್ರಾಡಿ ನಾಟ್ಕ ದೂರು ಚೌಟರ ಬಯಲಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಪಿಲಿಪತ್ತಿ ಗಡಸ್ ನಾಟಕ 300ನೇ ಪ್ರದರ್ಶನ ನಡೆಯಲಿದೆ.

ಉಡುಪಿ ಅದಾನಿ ಯುಪಿಸಿಎಲ್ ಪವರ್ ಕಾರ್ಪೋರೇಶನ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಪ್ರದರ್ಶನ ಉದ್ಘಾಟಿಸುವರು. ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸುವರು. ಉಡುಪಿ ಹನುಮಾನ್ ಗ್ರೂಫ್ಸ್ ಆಡಳಿತ ನಿರ್ದೇಶಕ ವಿಲಾಸ್ ನಾಯಕ್ ಉಪಸ್ಥಿತರಿರುವರು ಎಂದು ಸುಕುಮಾರ್ ಮೋಹನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News