ಜಿಲ್ಲೆಯ 491 ದೇವಸ್ಥಾನಗಳಲ್ಲಿ ಏಕಕಾಲಕ್ಕೆ ಸ್ವಚ್ಛತಾ ಕಾರ್ಯಕ್ರಮ

Update: 2017-03-26 18:30 GMT

ಮಂಗಳೂರು, ಮಾ.26: ಧಾರ್ಮಿಕ ದತ್ತಿ ಇಲಾಖೆಯ ‘ಸ್ವಚ್ಛ ಮಂದಿರ್’ ಅಭಿಯಾನದಡಿ ದ.ಕ. ಜಿಲ್ಲಾಡಳಿತದ ವತಿಯಿಂದ ಮುಜರಾಯಿ ಇಲಾಖೆಗೊಳಪಟ್ಟ 491 ದೇವಸ್ಥಾನಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಇಂದು ನಗರದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.

ಬಳಿಕ ಕಲ್ಕೂರ ಪ್ರತಿಷ್ಠಾನ ನೇತೃತ್ವದಲ್ಲಿ ಕದ್ರಿಯ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಪುಷ್ಕರಣಿ ಹಾಗೂ ದೇವಳದ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಕರಾವಳಿಯ ಧಾರ್ಮಿಕ ಕೇಂದ್ರಗಳಲ್ಲಿ ಈಗಾಗಲೇ ಸ್ವಚ್ಛತೆ ಕುರಿತು ಅರಿವು ಹುಟ್ಟಿಕೊಂಡಿದೆ. ದ.ಕ ಹಾಗೂ ಉಡುಪಿ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾರಿ ಡಾ.ಕೆ.ಜಿ.ಜಗದೀಶ್ ಮಾತನಾಡಿ, ಸ್ವಚ್ಛ ಮಂದಿರ್ ಅಭಿಯಾನದ ಮೂಲಕ ಜನರಲ್ಲೂ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳು ಕೈ ಜೋಡಿಸಬೇಕು ಎಂದರು.

ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ಷೆ ಪ್ರಮೀಳಾ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ದೇವಸ್ಥಾನದ ಟ್ರಸ್ಟಿ ಎ.ಜೆ.ಶೆಟ್ಟಿ, ಮಾಜಿ ಮೇಯರ್ ಹರಿನಾಥ್, ಕದ್ರಿ ದೇವಸ್ಥಾನದ ಕಾರ್ಯನಿರ್ವಹಣಾಕಾರಿ ನಿಂಗಯ್ಯ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಾರ್ಪೊರೇಟರ್‌ಗಳಾದ ಅಶೋಕ್ ಡಿ.ಕೆ., ಪ್ರಕಾಶ್ ಸಾಲ್ಯಾನ್, ರೂಪಾ ಡಿ. ಬಂಗೇರ ಮತ್ತು ಸುಧಾಕರ್ ರಾವ್ ಪೇಜಾವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News