×
Ad

ಮಳಲಿ-ಪೊಳಲಿ ಸಂಪರ್ಕ ರಸ್ತೆಗೆ ಗ್ರಾಮಸ್ಥರ ಆಗ್ರಹ

Update: 2017-03-27 17:56 IST

ಮಂಗಳೂರು, ಮಾ.27: ಬಜ್ಪೆ ಸಮೀಪದ ಮಳಲಿ ಪೇಟೆಯ ಕುರ್ಮೆಮಾರ್‌ನಿಂದ ಪೊಳಲಿಗೆ ಸಂಪರ್ಕ ರಸ್ತೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದೀಗ ಪೊಳಲಿಯಲ್ಲಿ ಜಾತ್ರೆ ನಡೆಯುತ್ತಿದ್ದು, ಮಳಲಿಯ ಜನರು ಅತ್ತ ತೆರಳಲು ರಸ್ತೆ ಮೂಲಕ ಸುಮಾರು 25 ಕಿ.ಮೀ. ದೂರ ಸುತ್ತುಬಳಸುವುದು ಅನಿವಾರ್ಯವಾಗಿದೆ.

ಅಂದಹಾಗೆ ಮಳಲಿಯಿಂದ ಪೊಳಲಿ ತಲುಪಲು ಕೇವಲ 10 ನಿಮಿಷದ ಹಾದಿ ಇದೆ. ಈ ಮಧ್ಯೆ ಫಲ್ಗುಣಿ ನದಿ ಸಿಗುತ್ತವೆ. ಬೇಸಿಗೆ ಕಾಲದಲ್ಲಿ ಈ ನದಿಯ ಮಧ್ಯೆ ಮರಳಿನ ದಿಬ್ಬ ಮಾಡಿ ಜನರು ಅತ್ತಿತ್ತ ಸಂಚರಿಸುವುದು ಸಾಮಾನ್ಯವಾಗಿದೆ. ಈ ಬಾರಿ ಫಲ್ಗುಣಿ ನದಿಯಲ್ಲಿ ನೀರು ಹರಿಯುವ ಕಾರಣ ಮಳಲಿಯ ಜನರು ಪೊಳಲಿ ಸೇರಲು ಪ್ರಯಾಸ ಪಡಬೇಕಾಗಿದೆ. ಅಂದರೆ ಮಳಲಿ, ಕಾಜಿಲ, ನೂಯಿ, ಅಡ್ಡೂರು ರಸ್ತೆಯಾಗಿ ಕನಿಷ್ಠ 25 ಕಿ.ಮೀ. ದೂರ ಕ್ರಮಿಸಬೇಕಾಗಿದೆ.ಹಾಗಾಗಿ ಫಲ್ಗುಣಿ ನದಿಗೆ ಸೇತುವೆ ಅಥವಾ ತೂಗುಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಫಲ್ಗುಣಿ ನದಿ ತೀರದಲ್ಲಿ ಮರಳುಗಾರಿಕೆ ನಡೆಯುತ್ತಿರುವುದರಿಂದ ಆಳ ಉಂಟಾಗಿದೆ. ಮರವೂರಿನಲ್ಲಿ ಕಿಂಡಿಅಣೆಕಟ್ಟು ನಿರ್ಮಿಸಿರುವುದರಿಂದ ನದಿ ತುಂಬಿ ಹರಿಯುತ್ತಿದೆ. ಹಾಗಾಗಿ ಮಳಲಿಯ ವಾಹನಿಗರು ಪೊಳಲಿ ಕ್ರಮಿಸಲು ಮಳಲಿ ಪೇಟೆಯಲ್ಲಿ ವಾಹನಗಳನ್ನು ನಿಲ್ಲಿಸಿ ಬಳಿಕ ನಡೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಬೇಸತ್ತ ಜನರು ಸೇತುವೆ ನಿರ್ಮಿಸಬೇಕು ಎಂದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಶಾಸಕರ ಸಹಿತ ಎಲ್ಲರೂ ಭರವಸೆಯನ್ನು ಮಾತ್ರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಱನಾವು ಕಳೆದ ಹಲವು ವರ್ಷದಿಂದ ಮಳಲಿ-ಪೊಳಲಿ ಮಧ್ಯೆ ಸಂಪರ್ಕ ಸಾಧಿಸುವಂತೆ ಮನವಿ ಮಾಡುತ್ತಾ ಬಂದಿದ್ದೇವೆ. ಸೇತುವೆ ನಿರ್ಮಿಸಿದರೆ ಹೆಚ್ಚು ಅನುಕೂಲ. ಅದು ಆರ್ಥಿಕ ಹೊರೆಯಾಗುವುದಾದರೆ ತೂಗುಸೇತುವೆಯಾದರೂ ನಿರ್ಮಾಣಗೊಳ್ಳಬೇಕು ಎಂದು ನಮ್ಮೆಲ್ಲರ ಆಸೆಯಾಗಿದೆ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ಲತೀಫ್ ಮಳಲಿ.

ಅಂದಹಾಗೆ, ಪೊಳಲಿಯು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯ ಬಂಟ್ವಾಳಕ್ಕೆ ಸೇರಿದ್ದರೆ, ಮಳಲಿಯು ಶಾಸಕ ಬಿ.ಎ.ಮೊಯ್ದಿನ್ ಬಾವಾರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಇವರಿಬ್ಬರು ಮನಸ್ಸು ಮಾಡಿದರೆ ಮಳಲಿ-ಪೊಳಲಿ ಮಧ್ಯೆ ಸಂಪರ್ಕ ಸಾಧ್ಯ ಎಂಬುದು ಜನರ ನಿರೀಕ್ಷೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News