" ನೀರನ್ನು ಗೌರವಿಸಿ; ನಮ್ಮ ನೀರು ನಮ್ಮ ಜವಾಬ್ದಾರಿ "
ಉಡುಪಿ, ಮಾ.27: ಅತ್ಯಧಿಕ ಮಳೆ ಬೀಳುವ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದು ನಾವು ನೀರನ್ನು ಗೌರವಿಸದಿರುವುದರ ಪರಿಣಾಮ. ಗಾಳಿ, ಬೆಳಕು, ನೀರು ಈಗ ದೇವರ ವರದಾನವಾಗಿ ಉಳಿದಿಲ್ಲ. ಇವೆಲ್ಲವನ್ನೂ ನಿರ್ವಹಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯ ಪ್ರಧಾನ ವೈಜ್ಞಾನಿಕ ಅಧಿಕಾರಿಎ.ಆರ್.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಆಯೋಜಿಸಲಾದ ಜಲಸಂರಕ್ಷಣೆ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ನೀರು ಇಂದು ಆಡಳಿತವನ್ನು ನಡೆಸುವ ಅಂಶವಾಗಿ ಪರಿವರ್ತನೆಯಾಗಿದೆ. ಇದಕ್ಕೆಂದೇ ಯೋಜನೆಗಳನ್ನು ರೂಪಿಸುವ ಹಂತಕ್ಕೆ ತಲುಪಿದ್ದೇವೆ ಎಂದ ಶಿವಕುಮಾರ್, ಒಬ್ಬರಿಗೆ ದಿನಕ್ಕೆ 11,500 ಲೀಟರ್ ನೀರು ಬೇಕಿದ್ದು, ನಾವಿನ್ನೂ ನೀರನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಆದರೆ ಪೆಟ್ರೋಲ್‌ನಂತೆ ನೀರನ್ನೂ ವಿತರಿಸುವ ದಿನಗಳು ಇದೇ ಮಾದರಿಯಲ್ಲಿ ನೀರನ್ನು ಬಳಸಿದರೆ ಮುಂದೊಂದು ದಿನ ಬರಲಿದೆ ಎಂದವರು ಎಚ್ಚರಿಸಿದರು.
ಸಾರ್ವಜನಿಕ ನೀರು ಸಂಗ್ರಹ ತಾಣಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಿರುವ ನಾವು ಅಂತರ್‌ಜಲಕ್ಕೆ ಕನ್ನ ಹಾಕಿ ಬೋರ್‌ವೆಲ್‌ಗಳನ್ನು ಮಿತಿ ಮೀರಿ ಕೊರೆದು ನೀರು ಪಡೆದೆವು. ಈಗ ಶೇ.98 ಬೋರ್‌ವೆಲ್‌ಗಳು ನಿಷ್ಪ್ರಯೋಜಕವಾಗಿವೆ ಎಂದು ಶಿವಕುಮಾರ್ ನುಡಿದರು.
ಮಾದರಿ: ಮಳೆ ನೀರನ್ನು ಸಂಗ್ರಹಿಸುವ ಅತ್ಯುತ್ತಮ ಮಾದರಿಗಳನ್ನು ಱಸುವರ್ಣ ಜಲ ಯೋಜನೆೞಯಡಿ ಉಡುಪಿ ಜಿಲ್ಲೆಯ ಹಲವು ಶಾಲೆಗಳಲ್ಲಿ ನಿರ್ಮಿಸಿರುವುದನ್ನು ಸ್ಮರಿಸಿದ ಅವರು, ಈ ಮಾದರಿಗಳಿಗೆ ನಿರ್ವಹಣೆಯ ಅಗತ್ಯವಿದೆ ಎಂದರು. ಮಳೆ ನೀರು ಅತ್ಯಂತ ಶುದ್ಧ ನೀರು.ಈ ನೀರನ್ನು ಸಂರಕ್ಷಿಸುವುದು ಕಷ್ಟದ ಕೆಲಸವೇನಲ್ಲ. ಇದಕ್ಕಾಗಿಯೇ ಹೊಸ ಆ್ಯಪ್ ಒಂದನ್ನು ತಯಾರಿಸಲಾಗಿದ್ದು, ಮಳೆನೀರು ಸಂರಕ್ಷಣೆಯ ಯೋಜನೆ, ಮಾಹಿತಿಯನ್ನು ಪಡೆಯಬಹುದು. ಮಳೆ ನೀರು ಸಂರಕ್ಷಣೆ ಬಗ್ಗೆ ainmanspeaks.blogspot.com- ವೆಬ್ ಸೈಟ್‌ನಿಂದಲೂ ಮಾಹಿತಿ ಪಡೆಯಬಹುದು ಎಂದರು.
ಮಳೆ ನೀರು ಸಂಗ್ರಹ ದೊಂದಿಗೆ ಅಂತರ್‌ಜಲ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದ ಅವರು, ಬೋರ್‌ವೆಲ್‌ಗೆ ಜಲಮರುಪೂರಣ ಮಾಡುವ ಬಗ್ಗೆಯೂ ವಿವರಿಸಿದರು. ಅಪರಾಹ್ನ ಜಿಲ್ಲೆಯಲ್ಲಿ ನೀರಿನ ಕೊರತೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷ ದಿನಕರ ಬಾಬು, ನೈಸರ್ಗಿಕವಾಗಿ ದೊರೆಯುವ ನೀರೆಂಬ ಸಂಪತ್ತಿನ ಸದ್ಬಳಕೆ ಅಗತ್ಯ ಎಂದರು. ನೀರಿಗಾಗಿ ಕಷ್ಟಪಡಬೇಕಾದ ದಿನಗಳು ನಮ್ಮ ಮುಂದಿದ್ದು, ಕೆರೆ, ಬಾವಿ ಸ್ವಚ್ಛಗೊಳಿಸಿ ಮುಂದಿನ ವರ್ಷ ನೀರು ಸಂಗ್ರಹಕ್ಕೆ ಜಿಲ್ಲೆ ಸಜ್ಜಾಗಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಕಾರ್ಯಾಗಾರ ಫಲಪ್ರದವಾಗಲು ಜಿಲ್ಲೆಯ ಇಂಜಿನಿಯರ್‌ಗಳು ನೀರಿನ ಕೊರತೆ ನಿವಾರಿಸಲು ಯೋಜನೆ ರೂಪಿಸಬೇಕು ಎಂದರು. ಸರಕಾರಿ ಹಾಸ್ಟೆಲ್, ಅಂಗನವಾಡಿ, ವೈಯಕ್ತಿಕ ಮನೆಗಳಿಗೆ ಮಳೆ ನೀರು ಸಂರಕ್ಷಣೆಯ ವಿನ್ಯಾಸ ರೂಪಿಸುವಂತೆ ತಿಳಿಸಿದ ಅವರು, ಅವುಗಳ ಅನುಷ್ಠಾನಕ್ಕೆ ಅನುದಾನ ನೀಡುವ ಹೊಣೆ ತನ್ನದು ಎಂದರು.
ನಗರ ಸ್ಥಳೀಯ ಸಂಸ್ಥೆಗಳು ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆಕೊಯ್ಲು ಅನುಷ್ಠಾನವಾಗಿದೆಯೇ ಎಂಬುದನ್ನು ಸ್ಥಳ ಪರಿಶೀಲನೆ ನಡೆಸಿ ಖಾತರಿ ಮಾಡಿಕೊಳ್ಳಬೇಕು. ಕಸ ವಿಲೇ ಮಾದರಿಯಲ್ಲೇ ಮಳೆಕೊಯ್ಲು ಮಾಹಿತಿಯನ್ನು ಜಿಲ್ಲೆಯ ಜನರಿಗೆ ನೀಡಿದರೆ, ಜಿಲ್ಲೆ ಜಲಸುಭಿಕ್ಷವಾಗುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾಧಿಕಾರಿ ನುಡಿದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು, ಇಂಜಿನಿಯರ್‌ಗಳು ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿ, ವಂದಿಸಿದರು.