ಆಸ್ಟ್ರೇಲಿಯದತ್ತ ಮುನ್ನುಗ್ಗುತ್ತಿರುವ ಪ್ರಬಲ ಚಂಡಮಾರುತ
ಕೇರ್ನ್ಸ್ (ಆಸ್ಟ್ರೇಲಿಯ), ಮಾ. 27: ಪ್ರಬಲ ಚಂಡಮಾರುತವೊಂದು ಉತ್ತರ ಆಸ್ಟ್ರೇಲಿಯದತ್ತ ಮುನ್ನುಗ್ಗುತ್ತಿದ್ದು, ಪ್ರವಾಸಿಗರು ಸೇರಿದಂತೆ ಸಾವಿರಾರು ಮಂದಿಯನ್ನು ಸೋಮವಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
‘ಡೆಬ್ಬಿ’ ಎಂಬ ಹೆಸರಿನ ಚಂಡಮಾರುತ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಕರಾವಳಿಯ ಸಮುದ್ರದಲ್ಲಿ ಹಲವು ದಿನಗಳಿಂದ ರೂಪುಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದು ಮಂಗಳವಾರ ಬೆಳಗ್ಗೆ ಕ್ವೀನ್ಸ್‌ಲ್ಯಾಂಡ್ ಕರಾವಳಿಗೆ ಅಪ್ಪಳಿಸುತ್ತದೆಂದು ನಿರೀಕ್ಷಿಸಲಾಗಿದೆ.
2011ರಲ್ಲಿ ರಾಜ್ಯಕ್ಕೆ ಅಪ್ಪಳಿಸಿದ ‘ಯಾಸಿ’ ಚಂಡಮಾರುತದ ಬಳಿಕ ರಾಜ್ಯಕ್ಕೆ ಎದುರಾಗಿರುವ ಪ್ರಬಲ ಚಂಡಮಾರುತ ಇದಾಗಿದೆ. 2011ರ ಚಂಡಮಾರುತವು ಮನೆಗಳನ್ನು ಪಂಚಾಂಗ ಸಮೇತ ಬುಡಮೇಲು ಮಾಡಿತ್ತು ಹಾಗೂ ಬೆಳೆ ನಾಶಕ್ಕೆ ಕಾರಣವಾಗಿತ್ತು.
ಹೋಮ್ ಹಿಲ್ ಮತ್ತು ಪ್ರಾಸರ್‌ಪೈನ್ ಪಟ್ಟಣಗಳ 3,500ಕ್ಕೂ ಅಧಿಕ ಜನರನ್ನು ಈವರೆಗೆ ಸ್ಥಳಾಂತರಿಸಲಾಗಿದೆ ಹಾಗೂ ಮನೆ ತೊರೆಯುವಂತೆ ಇನ್ನೂ 2,000 ಜನರಿಗೆ ಸೂಚನೆ ನೀಡಲಾಗಿದೆ. ಈ ಪಟ್ಟಣಗಳು ಪ್ರಸಿದ್ಧ ಪ್ರವಾಸಿ ಕೇಂದ್ರಗಳಾಗಿವೆ.