×
Ad

ಟ್ರಂಪ್ ಆರೋಗ್ಯ ಮಸೂದೆಗೆ ಸೋಲು; ರಿಪಬ್ಲಿಕನ್ ಸಂಸದ ರಾಜೀನಾಮೆ

Update: 2017-03-27 19:54 IST

ವಾಶಿಂಗ್ಟನ್, ಮಾ. 27: ಅಮೆರಿಕದ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ‘ಒಬಾಮ ಕೇರ್’ ಕಾರ್ಯಕ್ರಮವನ್ನು ರದ್ದುಪಡಿಸುವ ಉದ್ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಹತ್ವಾಕಾಂಕ್ಷೆಯ ಮಸೂದೆಗೆ ಸೋಲಾದ ಹಿನ್ನೆಲೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಸಂಸದ ಟೆಡ್ ಪೋ, ಹೌಸ್ ಫ್ರೀಡಂ ಕಾಕಸ್‌ಗೆ ರವಿವಾರ ರಾಜೀನಾಮೆ ನೀಡಿದ್ದಾರೆ.

ಟ್ರಂಪ್ ಮಸೂದೆಯ ಸೋಲಿನಲ್ಲಿ ಹೌಸ್ ಫ್ರೀಡಂ ಕಾಕಸ್ ಮಹತ್ವದ ಪಾತ್ರ ವಹಿಸಿತ್ತು.‘‘ಬೇಡ ಎಂದು ಹೇಳುವುದು ಸುಲಭ, ಆದರೆ ಮುನ್ನಡೆಸುವುದು ಕಷ್ಟ. ಆದರೆ, ನಮ್ಮನ್ನು ಆಯ್ಕೆ ಮಾಡಿರುವುದು ಅದಕ್ಕಾಗಿಯೇ’’ ಎಂದು ಟೆಕ್ಸಾಸ್ ಸಂಸದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘‘ಈ ಕಾಕಸ್‌ನಿಂದ ಹೊರಬಂದರೆ ನಾನು ಕಾಂಗ್ರೆಸ್‌ನ ಹೆಚ್ಚು ಪರಿಣಾಮಕಾರಿ ಸದಸ್ಯನಾಗಬಹುದು’’ ಎಂದರು.

ಟೆಡ್ ಪೋ ಅವರು ಟ್ರಂಪ್ ಮಸೂದೆಯ ಪರಾವಾಗಿದ್ದರು. ಆದರೆ, ಟ್ರಂಪ್‌ರ ಮಸೂದೆ 2010ರ ‘ಅಗ್ಗದ ಆರೋಗ್ಯ ರಕ್ಷಣೆ ಕಾಯ್ದೆ’ ಅಥವಾ ‘ಒಬಾಮಕೇರ್’ನ ಸ್ಥಾನದಲ್ಲಿ ಬರುವಷ್ಟು ಸುಸ್ಥಿರವಾಗಿಲ್ಲ ಎಂಬ ಅಭಿಪ್ರಾಯವನ್ನು ಫ್ರೀಡಂ ಕಾಕಸ್ ಹೊಂದಿತ್ತು.

ಹಾಗಾಗಿಯೇ, ಟ್ರಂಪ್‌ರ ಮಹತ್ವಾಕಾಂಕ್ಷೆಯ ಮಸೂದೆ ಸಂಸತ್ತು ಕಾಂಗ್ರೆಸ್‌ನಲ್ಲಿ ಬಿದ್ದು ಹೋಯಿತು.

ಒಬಾಮರ ಇಂಧನ ನೀತಿಗೆ ಖೊಕ್ ಕೊಡಲಿರುವ ಟ್ರಂಪ್

ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಂದ ಹೊರಡುವ ಇಂಗಾಲದ ಡೈ ಆಕ್ಸೈಡ್ ಅನಿಲದ ಪ್ರಮಾಣವನ್ನು ಸೀಮಿತಗೊಳಿಸುವ ತನ್ನ ಪೂರ್ವಾಧಿಕಾರಿ ಬರಾಕ್ ಒಬಾಮರ ಯೋಜನೆಯನ್ನು ರದ್ದುಪಡಿಸುವ ಉದ್ದೇಶದ ಸರಕಾರಿ ಆದೇಶವೊಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸಹಿ ಹಾಕಲಿದ್ದಾರೆ.

ಒಬಾಮ 2015ರಲ್ಲಿ ಜಾರಿಗೆ ತಂದ ‘ಶುದ್ಧ ವಿದ್ಯುತ್ ಯೋಜನೆ’ಯನ್ನು ರದ್ದುಪಡಿಸಿದರೆ ಕಲ್ಲಿದ್ದಲು ಕ್ಷೇತ್ರದ ಉದ್ಯೋಗಗಳು ಮರಳುತ್ತವೆ ಎಂದು ಎಬಿಸಿ ಸುದ್ದಿ ಚಾನೆಲ್‌ನ ರವಿವಾರದ ಕಾರ್ಯಕ್ರಮ ‘ದಿಸ್ ವೀಕ್’ನಲ್ಲಿ ಮಾತನಾಡಿದ ಪರಿಸರ ಸಂರಕ್ಷಣಾ ಸಂಸ್ಥೆಯ ಆಡಳಿತಗಾರ ಸ್ಕಾಟ್ ಪ್ರೂಯಿಟ್ ಹೇಳಿದರು.

‘‘ಹಿಂದಿನ ಆಡಳಿತ ಭೂಗರ್ಭ ಇಂಧನ ಬಳಕೆ ವಿರುದ್ಧದ ನೀತಿಯನ್ನು ಅನುಸರಿಸಿತ್ತು’’ ಎಂದರು.‘‘ಈ ಮೂಲಕ ಅಮೆರಿಕದ ಜನರಿಗೆ ನೀಡಿರುವ ಭರವಸೆಯನ್ನು ಟ್ರಂಪ್ ಈಡೇರಿಸುತ್ತಿದ್ದಾರೆ. ಈಗ ನಾವು ಜನರನ್ನು ಮತ್ತೆ ಕೆಲಸಕ್ಕೆ ಹಚ್ಚಬಹುದು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News