ಬೈಂದೂರು ತಾಲೂಕಿಗೆ ವಂಡ್ಸೆ ಹೋಬಳಿ ಸೇರ್ಪಡೆಗೆ ವಿರೋಧ
ವಂಡ್ಸೆ, ಮಾ.27:ಹುಂಡೇಕರ್ ಸಮಿತಿ ವರದಿಯಾಗಲಿ, ಎಂ.ಬಿ.ಪ್ರಕಾಶ್ ಸಮಿತಿ ವರದಿಯಾಗಲಿ ಹೊಸ ತಾಲೂಕು ರಚನೆಯ ವೇಳೆ ಇದನ್ನು ತಾಲೂಕು ಕೇಂದ್ರವಾಗಿ ಮಾಡಬೇಕೆಂದು ತಿಳಿಸಿಲ್ಲ. ಆದರೆ ಇದುವರೆಗೆ ಯಾವ ಸರಕಾರ ಸಹ ತಾಲೂಕು ರಚನೆಗೆ ಸಂಬಂಧಿಸಿದ ಯಾವುದೇ ವರದಿಗೂ ಗೌರವ ಕೊಟ್ಟಿಲ್ಲ. ಆಡಳಿತ ಪಕ್ಷದ ಸ್ಥಳಿಯ ಶಾಸಕರು ಹೇಳಿದಂತೆ ತಾಲೂಕು ರಚನೆ ನಡೆಯುತ್ತಿದೆಯೇ ಹೊರತು ಜನರ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿಲ್ಲ ಎಂದು ನ್ಯಾಯವಾದಿ ಟಿ.ಬಿ.ಶೆಟ್ಟಿ ಹೇಳಿದ್ದಾರೆ.
ವಂಡ್ಸೆ ಹೋಬಳಿ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ರವಿವಾರ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಸರಕಾರ ಇತ್ತೀಚೆಗೆ ಘೋಷಿಸಿದ ಬೈಂದೂರು ತಾಲೂಕನ್ನು ಕೇವಲ ಬೈಂದೂರು ಹೋಬಳಿಗೆ ಸೀಮಿತವಾಗಿ ಮಾಡುವುದಾದರೆ ಸ್ವಾಗತ. ವಂಡ್ಸೆ ಹೋಬಳಿಯನ್ನು ಅದಕ್ಕೆ ಸೇರಿಸಿದರೆ ಎಲ್ಲಾ ರೀತಿಯ ರೀತಿಯ ಹೋರಾಟ ನಡೆಸಲಾಗುವುದು ಎಂದವರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಬೈಂದೂರು ಕ್ಷೇತ್ರ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಅಭಿವೃದ್ಧಿ ದೃಷ್ಟಿಯಲ್ಲಿ ಬೈಂದೂರು ಹೋಬಳಿಯನ್ನೇ ತಾಲೂಕು ಮಾಡುವುದು ಸ್ವಾಗತಾರ್ಹ. ಆದರೆ ವಂಡ್ಸೆ ಹೋಬಳಿ ಕುಂದಾಪುರ ತಾಲೂಕಿನ ಅತಿ ದೊಡ್ಡ ಹೋಬಳಿ. ನಿಜಕ್ಕೂ ವಂಡ್ಸೆಯನ್ನೇ ತಾಲೂಕು ಮಾಡಬೇಕಿತ್ತು ಎಂದರು.
ತಲ್ಲೂರು ತಾಪಂ ಸದಸ್ಯ ಕರಣ್ ಕುಮಾರ್, ಬೈಂದೂರು ಬಿಜೆಪಿ ಬ್ಲಾಕ್ ಅಧ್ಯಕ್ಷ ಸದಾನಂದ, ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ, ವಂಡ್ಸೆ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಕೆರಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸಬ್ಲಾಡಿ ನಾರಾಯಣ ಶೆಟ್ಟಿ, ಮಾಜಿ ತಾಪಂ ಸದಸ್ಯ ಟಿ.ಕೆ. ಕೋಟ್ಯಾನ್ ತಲ್ಲೂರು ಮಾತನಾಡಿದರು.
ಸಭೆಯಲ್ಲಿ ವಂಡ್ಸೆ ಹೋಬಳಿಯನ್ನು ಬೈಂದೂರು ತಾಲೂಕಿಗೆ ಸೇರಿಸುವುದರ ಕುರಿತು ಕ್ಷೇತ್ರದ ಶಾಸಕರು ಮತ್ತು ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಇದ್ದಲ್ಲಿ ವಂಡ್ಸೆ ಹೋಬಳಿ ಮಟ್ಟದಲ್ಲಿ ಜನರ ಸಹಿ ಸಂಗ್ರಹ ಅಭಿಯಾನ, ಬಂದ್ ಆಚರಣೆ, ಪ್ರತಿಭಟನಾ ಸಭೆ ಹಾಗೂಮುಂದುವರಿದ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದೆಂದು ನಿರ್ಣಯಿಸಲಾಯಿತು.
ನಿರ್ಣಯದ ವಿವರಗಳನ್ನು ವಂಡ್ಸೆ ಹೋಬಳಿ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಚಿತ್ತೂರು ಡಾ.ಅತುಲ್ ಕುಮಾರ್ ಶೆಟ್ಟಿ ಪ್ರಕಟಿಸಿದರು. ಗಂಗೊಳ್ಳಿ ತಾಪಂ ಸದಸ್ಯ ಸುರೇಂದ್ರ ಖಾರ್ವಿ,ಕೆರಾಡಿ ಗ್ರಾಪಂ ಅಧ್ಯಕ್ಷ ಸಂತೋಷ ಕೊಠಾರಿ, ಚಿತ್ತೂರು ಗ್ರಾಪಂ ಅಧ್ಯಕ್ಷ ಸಂತೋಷ ಮಡಿವಾಳ, ಆಲೂರು ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಚಿತ್ತೂರು ಗ್ರಾಪಂ ಮಾಜಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ವಂಡ್ಸೆ ಗ್ರಾಪಂ ಸದಸ್ಯ ವಿ.ಕೆ. ಶಿವರಾಮ ಶೆಟ್ಟಿ, ಹೆಮ್ಮಾಡಿ ಮಾಜಿ ಮಂಡಲ ಪ್ರಧಾನ ಕೂಕನಾಡು ಸೋಮಶೇಖರ ಶೆಟ್ಟಿ, ಕೆರಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸುದರ್ಶನ ಶೆಟ್ಟಿ, ವಂಡ್ಸೆ ಸಿ.ಎ. ಬ್ಯಾಂಕ್ ನಿರ್ದೇಶಕ ಬಿ. ರಾಮ ಹೊಸೂರು, ಕುಂದಾಪುರ ರೋಟರಿ ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಉಪಸ್ಥಿತರಿದ್ದರು.
ಡಾ.ಅತುಲ್‌ಕುಮಾರ್ ಶೆಟ್ಟಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.