ಗುಡ್ಡದಲ್ಲಿ ನಿಷೇಧಿತ ಒಂದು ಸಾವಿರ ಮುಖಬೆಲೆಯ ನೋಟುಗಳು ಪತ್ತೆ
Update: 2017-03-27 20:13 IST
ಬಂಟ್ವಾಳ, ಮಾ. 27: ನರಹರಿ ಬೆಟ್ಟಿದ ಬಳಿ ನಿಷೇಧಿತ 1,000 ರೂ. ಮುಖಬೆಲೆಯ 40 ಸಾವಿರ ರೂಪಾಯಿ ವ್ಯಕ್ತಿಯೊಬ್ಬರಿಗೆ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.
ಸ್ಥಳೀಯ ನಿವಾಸಿ ಗಂಗಾಧರ್ ಎಂಬವರು ಉಪ್ಪಿನ ಕಾಯಿ ತಯಾರಿಕೆಗೆ ಕರಂಡೆ ಕಾಯಿ ಸಂಗ್ರಹಿಸಲು ನರಹರಿ ಪರ್ವತದ ಗುಡ್ಡಕ್ಕೆ ತೆರಳಿದ್ದ ಸಂದರ್ಭದಲ್ಲಿ ಮರವೊಂದರ ಬುಡದಲ್ಲಿ ನೋಟುಗಳು ಪತ್ತೆಯಾಗಿದೆ. ಪ್ರಸ್ತುತ 1,000 ರೂ. ಮೌಲ್ಯದ ನೋಟು ನಿಷೇಧವಾಗಿದ್ದರಿಂದ ಯಾರೋ ಈ ನೋಟುಗಳನ್ನು ಇಲ್ಲಿ ಎಸೆದಿರಬೇಕೆಂದು ಶಂಕಿಸಲಾಗಿದೆ.
ಪತ್ತೆಯಾದ 40 ಸಾವಿರ ರೂಪಾಯಿಯನ್ನು ಗಂಗಾಧರ್ ಅವರು ಬಂಟ್ವಾಳ ನಗರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ನಗದನ್ನು ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಲಾಗಿದ್ದು ಪತ್ತೆಯಾದ ನೋಟುಗಳ ಬದಿ ಗೆದ್ದಲು ಹಿಡಿದ ಸ್ಥಿತಿಯಲ್ಲಿದ್ದವು ಎಂದು ಎಸ್ಸೈ ಎ.ಕೆ.ರಕ್ಷಿತ್ ಅವರು ತಿಳಿಸಿದ್ದಾರೆ.