ರೇಶನ್ ಕಾರ್ಡ್ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ವಿರುದ್ಧ ಸಿಪಿಎಂ ಧರಣಿ
ಮಂಗಳೂರು,ಮಾ.27: ಗ್ಯಾಸ್ ಮತ್ತು ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ತಡೆಗಟ್ಟಬೇಕು, ಪಡಿತರ ಅವ್ಯವಸ್ಥೆಯನ್ನು ಸರಿಪಡಿಸಬೇಕು, ಕುಡಿಯುವ ನೀರು ಒದಗಿಸಬೇಕು ಎಂದು ಆಗ್ರಹಿಸಿ ಸೋಮವಾರ ದ.ಕ. ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ನೇತೃತ್ವದಲ್ಲಿ ಧರಣಿ ನಡೆಯಿತು. ಅದಕ್ಕೂ ಮುನ್ನ ನಗರದ ಮಿನಿ ವಿಧಾನಸೌಧದಿಂದ ರ್ಯಾಲಿ ನಡೆಸಿದರು.
ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಱಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಮುಖವಾಗುತ್ತಿದ್ದರೂ,ಕೇಂದ್ರ ಸರಕಾರವು ಅವುಗಳ ದರಗಳನ್ನು ಪದೇ ಪದೇ ಹೆಚ್ಚಿಸುತ್ತಾ ಬಂದಿದೆ. ಇದರಿಂದ ಇತರ ಸರಕುಗಳ, ಆಹಾರ ಸಾಮಾಗ್ರಿಗಳ ಬೆಲೆಗಳೂ ಹೆಚ್ಚುತ್ತಾ ಹೋಗಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೇಶನ್ ಕಾರ್ಡುಗಳನ್ನೇ ಇಲ್ಲವಾಗಿಸಲು ವ್ಯವಸ್ಥಿತ ಪಿತೂರಿ ಹೆಣೆದಿದೆ. ಪಡಿತರ ವ್ಯವಸ್ಥೆಯಲ್ಲಿ ಬಿಪಿಎಲ್ ಕಾರ್ಡು ಹೊಂದಿದ ಬಡವರಿಗೆ ಕೂಪನ್ ನೀಡುವ ವ್ಯವಸ್ಥೆಯೂ ತೀರಾ ಅವ್ಯವಸ್ಥೆಯಿಂದ ಕೂಡಿದೆ. ಕೂಪನ್ ಪಡೆಯುವುದು ಒಂದೆಡೆ, ಆಹಾರ ಪಡೆಯುವುದು ಇನ್ನೊಂದೆಡೆ. ಕೂಪನ್ ಒಂದೆಡೆ ಸಂಗ್ರಹಿಸಿ ಆಹಾರ ಒದಗಿಸುವ ಕೇಂದ್ರಕ್ಕೆ ಹೋದಾಗ, ಆ ಕೇಂದ್ರಕ್ಕೆ ಆಹಾರ ಪೂರೈಕೆ ಆಗಿರದೆ ಜನ ವಾಪಸ್ಸಾಗುವ ಸಂದರ್ಭಗಳು ಬಂದಿವೆೞ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಎಂ ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಜಯಂತಿ ಬಿ. ಶೆಟ್ಟಿ ಭಾಗವಹಿಸಿದ್ದರು.
ಹೋರಾಟದ ನೇತೃತ್ವವನ್ನು ಮಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಶಕ್ತಿನಗರ, ಭಾರತಿ ಬೋಳಾರ್, ಸಾದಿಕ್ ಕಣ್ಣೂರು, ದಿನೇಶ್ ಶೆಟ್ಟಿ, ಸುರೇಶ್ ಬಜಾಲ್ ವಹಿಸಿದ್ದರು.