×
Ad

​ಅಪಾಯಕಾರಿ ಇದ್ದಿಲು ಘಟಕದ ವರದಿಗೆ ತೆರಳಿದ ಪತ್ರಕರ್ತರ ಮೇಲೆ ನಿಂದನೆ, ಚಿತ್ರೀಕರಣಕ್ಕೆ ಅಡ್ಡಿ

Update: 2017-03-27 20:37 IST

ಮೂಡುಬಿದಿರೆ, ಮಾ.27: ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಎಂಬಲ್ಲಿ ಅಪಾಯಕಾರಿ ಇದ್ದಿಲು ಘಟಕದ ಕುರಿತಾಗಿ ವರದಿ ಮಾಡಲು ತೆರಳಿದ್ದ ಸಂದರ್ಭ ಇಬ್ಬರು ಪತ್ರಕರ್ತರಿಗೆ ಘಟಕದ ಮ್ಯಾನೇಜರ್ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದ ಘಟನೆ ಸೋಮವಾರ ನಡೆದಿದೆ.

ಮಾಂಟ್ರಾಡಿ ಎಂಬಲ್ಲಿ ಒಲಿವಿಯಾ ಲೋಬೋ ಎಂಬವರ ಜಾಗದಲ್ಲಿ ಅಕ್ರಮವಾಗಿ ತೆಂಗಿನ ಚಿಪ್ಪಿನ ಇದ್ದಿಲು ಘಟಕ 2012ರಿಂದ ಕಾರ್ಯಾಚರಿಸುತ್ತಿದ್ದು, ಈ ಘಟಕದಿಂದಾಗಿ ಸ್ಥಳೀಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದ್ದರು.

ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿದ್ದ ಟಿವಿ ಚಾನೆಲ್ ವರದಿಗಾರರಾದ ರಾಘವೇಂದ್ರ ಶೆಟ್ಟಿ ಹಾಗೂ ಶರತ್ ದೇವಾಡಿಗ ಕಾಂತಾವರ ಅವರ ಮೇಲೆ ಹರಿಹಾಯ್ದ ಸಂಸ್ಥೆಯ ಮ್ಯಾನೇಜರ್ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇದ್ದಿಲು ಘಟಕವನ್ನು ಬಂದ್ ಮಾಡುವಂತೆ ನೆಲ್ಲಿಕಾರು ಪಂಚಾಯತ್ ಪಿಡಿಒ ಪ್ರಶಾಂತ್ ಕುಮಾರ್ ಶೆಟ್ಟಿಯವರು ಮಾರ್ಚ್ 13ರಂದು ನೋಟೀಸ್ ಜಾರಿಗೊಳಿಸಿದ್ದರು. ಆದರೆ ಅದನ್ನು ಪಾಲಿಸದೇ ಅಕ್ರಮವಾಗಿ ಇದ್ದಿಲು ಘಟಕದಲ್ಲಿ ಕೆಲಸವನ್ನು ಮುಂದುವರಿಸಿದ್ದಾರೆ.

 ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ನೆಲ್ಲಿಕಾರು ಗ್ರಾ.ಪಂ. ಅಧ್ಯಕ್ಷ ಜಯಂತ ಹೆಗ್ಡೆ, ಇದ್ದಿಲು ಘಟಕದ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದು, ಘಟಕ ಮುಚ್ಚುವಂತೆ ಸೂಚಿಸಿದ ನಂತರವೂ ಕಾರ್ಯಾಚರಿಸುತ್ತಿದೆ. ಪೊಲೀಸರ ಸಹಾಯದಿಂದ ಮುಚ್ಚುವ ಬಗ್ಗೆ ಪಿಡಿಒ ಅವರಿಗೆ ಸೂಚಿಸಿದ್ದೇವೆ ಎಂದಿದ್ದಾರೆ.

ಇದ್ದಿಲು ಘಟಕದಿಂದ ಪರಿಸರದಲ್ಲಿ ವ್ಯಾಪಕವಾಗಿ ಹಾರುಬೂದಿ ಹರಡುತ್ತಿದ್ದು ಸ್ಥಳೀಯರಲ್ಲಿ ಅಸ್ತಮಾದಂತಹ ಗಂಭೀರ ಖಾಯಿಲೆಗಳ ಗುಣಲಕ್ಷಣಗಳು ಗೋಚರಿಸಿದೆ. ಈ ಕುರಿತಾಗಿ ಸ್ಥಳೀಯರು ತಮ್ಮ ವೈದ್ಯಕೀಯ ವರದಿಗಳನ್ನು ಅಧಿಕಾರಿಗಳಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News