ಹಾಜಿ ಅಬ್ದುಲ್ಲಾ ಆಸ್ಪತ್ರೆ ಜಾಗ ಖಾಸಗಿಗೆ ಹಸ್ತಾಂತರ: ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ; ,ಮಾ.28ರಂದು ತೀರ್ಮಾನ
ಉಡುಪಿ, ಮಾ.27: ದಿ.ಖಾನ್ ಬಹದ್ದೂರ್ ಹಾಜಿ ಅಬ್ದುಲ್ ಸಾಹೇಬರು ದಾನವಾಗಿ ನೀಡಿರುವ ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲು ಬಿಟ್ಟು ಕೊಟ್ಟಿರುವ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಹಾಜಿ ಅಬ್ದುಲ್ ಸಾಹೇಬರ ಸೋದರ ಸಂಬಂಧಿ ಖುರ್ಷಿದ್ ಅಹ್ಮದ್ ನೇತೃತ್ವದಲ್ಲಿ ಮೀನಾಕ್ಷಿ ಭಂಡಾರಿ, ಪ್ರೊ.ಕೆ.ಫಣಿರಾಜ್ ಸೇರಿದಂತೆ ಉಡುಪಿಯ ಸಾರ್ವಜನಿಕರು ನ್ಯಾಯಾಲಯದ ಮೆಟ್ಟಲೇರಿದ್ದು, ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಕುರಿತು ನಗರದ ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಲಯದ ನ್ಯಾಯಾಧೀಶ ರಾದ ಮಿಲನಾ ನಾಳೆ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಖುರ್ಷಿದ್ ಅಹ್ಮದ್ ಸೇರಿದಂತೆ ಹಾಜಿ ಅಬ್ದುಲ್ಲಾರ ಎಂಟು ಮಂದಿ ಸಂಬಂಧಿಗಳು ಹಾಗೂ ಉಡುಪಿಯ ಗಣ್ಯರು ಸೇರಿ 40ಕ್ಕೂ ಅಧಿಕ ಮಂದಿ ಇಂದಿನ ಮಾರುಕಟ್ಟೆ ವೌಲ್ಯ 100 ಕೋಟಿ ರೂ.ಗಳಿಗೂ ಅಧಿಕ ಇರುವ ನಗರದ ಕೇಂದ್ರಸ್ಥಾನದಲ್ಲಿರುವ ಹೆಂಗಸರರ ಮತ್ತು ಮಕ್ಕಳ ಆಸ್ಪತ್ರೆಗೆ ಸೇರಿದ ಜಾಗವನ್ನು ದುಬೈನಲ್ಲಿ ನೆಲೆಸಿರುವ ಉಡುಪಿಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ 60 ವರ್ಷಗಳ ಗುತ್ತಿಗೆಗೆ ನೀಡಿರುವುದನ್ನು ಪ್ರಶ್ನಿಸಿ ಱಸಾರ್ವಜನಿಕ ಪ್ರಾತಿನಿಧಿಕ ದಾವೆೞ (ಪಬ್ಲಿಕ್ ರೆಪ್ರಸೆಂಟೇಟಿವ್ ಸೂಟ್) ದಾಖಲಿಸಿ, ಸರಕಾರ ಹಾಗೂ ಖಾಸಗಿ ನಡುವಿನ ಒಪ್ಪಂದ ಹಾಗೂ ಜಾಗದ ಹಸ್ತಾಂತರಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದಾರೆ.
ಹಾಜಿ ಅಬ್ದಲ್ಲಾ ಅವರು ಸುಮಾರು 90 ವರ್ಷಗಳ ಹಿಂದೆ ತನ್ನ ಸ್ವಂತ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಿ ಸರಕಾರಕ್ಕೆ ದಾನಪತ್ರದ ಮೂಲಕ ಬಿಟ್ಟು ಕೊಡುವಾಗ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿ, ಅವರ ಕುಟುಂಬ ದೊಂದಿಗೆ ಸಮಾಲೋಚಿಸದೇ ಸರಕಾರ ನಿರ್ಧಾರವನ್ನು ತೆಗೆದುಕೊಂಡಿದೆ. ಆದುದರಿಂದ ಜಾಗದ ಹಸ್ತಾಂತರಕ್ಕೆ ತಡೆಯಾಜ್ಞೆ ನೀಡಬೇಕೆಂದು ದಾವೆದಾರರ ಪರ ವಕೀಲರಾದ ಎನ್.ಕೃಷ್ಣ ಆಚಾರ್ಯ ವಾದಿಸಿದರು.
1929ರಲ್ಲಿ ಮೂಡನಿಡಂಬೂರು ಗ್ರಾಮದಲ್ಲಿ ಒಟ್ಟು 4.07 ಎಕರೆ ಸ್ವಂತ ಜಮೀನನ್ನು ಹಾಜಿ ಅಬ್ದುಲ್ ಸಾಹೇಬರು ತನ್ನ ಜೀವಿತಾವಧಿಯಲ್ಲಿ ಸರಕಾರಿ ಮಹಿಳೆಯರ ಹೆರಿಗೆ ಆಸ್ಪತ್ರೆ, ತಂದೆ ಖಾಜಿ ಖಾಸಿಂ ಬುಡಾನ್ ಸಾಹೇಬರ ಹೆಸರಿನಲ್ಲಿ ಮಕ್ಕಳ ಆಸ್ಪತ್ರೆ ಮತ್ತು ವೈದ್ಯರಿಗೆ, ನರ್ಸ್‌ಗಳಿಗೆ ವಸತಿ ಕಟ್ಟಡವನ್ನು ನಿರ್ಮಿಸಿ ದಾನ ಪತ್ರ ಬರೆದು ಅಂದಿನ ತಾಲೂಕು ಬೋರ್ಡ್‌ಗೆ ನೀಡಿದ್ದರು.
ಈ ಜಮೀನು ಸರಕಾರಿ ಆಸ್ಪತ್ರೆಯಾಗಿ ಉಳಿಯುವಂತೆ ಮತ್ತು ಈ ಆಸ್ಪತ್ರೆಗೆ ತನ್ನ ಮತ್ತು ತಂದೆಯ ಹೆಸರನ್ನು ಶಾಶ್ವತವಾಗಿ ಇಡುವಂತೆ ಅವರು ಅದರಲ್ಲಿ ಸೂಚಿಸಿದ್ದರು. ಈ ಕಟ್ಟಡದ ಉದ್ದೇಶವನ್ನು ಬದಲಾವಣೆ ಮಾಡದಂತೆ ಮತ್ತು ಜಮೀನಿನಲ್ಲಿ ಕಟ್ಟಡವನ್ನು ನಿರ್ಮಿಸಿ ಅದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಮತ್ತು ಆಸ್ಪತ್ರೆಗೆ ಬೇಕಾಗುವ ಪುಸ್ತಕ ಭಂಡಾರವನ್ನು ನೀಡಿರುವುದಾಗಿ ದಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಅವರ ಉದ್ದೇಶದಂತೆ ಈ ಜಮೀನಿನಲ್ಲಿ ಸರಕಾರವೇ ನೇರವಾಗಿ ಕಟ್ಟಡ ನಿರ್ಮಿಸದೆ ಖಾಸಗಿಯರಿಗೆ ವಹಿಸಿಕೊಡಲಾಗುತ್ತಿದೆ. ಆ ಮೂಲಕ ದಾನಿಯೊಬ್ಬರ ಉದ್ದೇಶವನ್ನು ಬದಲಾವಣೆ ಮಾಡಲಾಗುತ್ತಿದೆ. ಆದುದರಿಂದ ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಕಟ್ಟಡ ನಿರ್ಮಿ ಸಲು ಅನುಮತಿ ನೀಡಬಾರದು ಎಂದು ಖುರ್ಷಿದ್ ಅಹ್ಮದ್ ತಿಳಿಸಿದ್ದಾರೆ.