×
Ad

ಚಿಲ್ಲರೆ ಇಲ್ಲವೆಂದ ಪ್ರಯಾಣಿಕನನ್ನು ಚಾರ್ಮಾಡಿ ಘಾಟ್‌ನ ನಿರ್ಜನ ಪ್ರದೇಶದಲ್ಲಿ ಇಳಿಸಿದ ಕಂಡಕ್ಟರ್..!

Update: 2017-03-27 22:09 IST

ಮೂಡಿಗೆರೆ, ಮಾ.27: ದಾವಣಗೆರೆಯಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಹತ್ತಿದ್ದ ಅಬ್ದುಲ್ ಹಮೀದ್ ಮುಸ್ಲಿಯಾರ್ ಎಂಬ ಪ್ರಯಾಣಿಕರೋರ್ವರೊಂದಿಗೆ ಬಸ್ ಕಂಡಕ್ಟರ್‌ನೋರ್ವ ಚಿಲ್ಲರೆಗಾಗಿ ವಾಗ್ವಾದಕ್ಕಿಳಿದು ಚಾರ್ಮಾಡಿ ಘಾಟ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಇಳಿಸಿದ ಅಮಾನವೀಯ ಘಟನೆ ರವಿವಾರ ನಡೆದಿದೆ.

ಕೊಟ್ಟಿಗೆಹಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಕ್ಕಿಂಜೆಗೆ ಹೋಗುತ್ತಿದ್ದ ಅಬ್ದುಲ್ ಹಮೀದ್ ಮುಸ್ಲಿಯಾರ್ ರವಿವಾರ ಬೆಳಿಗ್ಗೆ 11.30ರ ಸಮಯದಲ್ಲಿ ಬಿ.ಸಿ.ರೋಡ್ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಹತ್ತಿದ್ದರು. ಮೂಲತಃ ಕಕ್ಕಿಂಜೆ ಗ್ರಾಮದ ಅಬ್ದುಲ್ ಹಮೀದ್ ಮುಸ್ಲಿಯಾರ್ ಸಕಲೇಶಪುರದ ಮದರಸಕ್ಕೆ ತಪಾಷಣೆ ನಿಮಿತ್ತ ತೆರಳಿ ಹಿಂತಿರುಗುತ್ತಿದ್ದರು. ಕೊಟ್ಟಿಗೆಹಾರದವರೆಗೆ ಖಾಸಗಿ ವಾಹನದಲ್ಲಿ ಪ್ರಯಾಣಿಸಿ ಕೊಟ್ಟಿಗೆಹಾರದಿಂದ ದಾವಣಗೆರೆ-ಮಂಗಳೂರು ಬಸ್‌ಗೆ ಹತ್ತಿದ್ದರು.

ಕಂಡಕ್ಟರ್‌ಗೆ 50 ರೂ.ಗಳ ನೋಟ್ ಕೊಟ್ಟಿದ್ದ ಅಬ್ದುಲ್ ಹಮೀದ್ ಮುಸ್ಲಿಯಾರ್‌ಗೆ ಬಸ್ ಕಂಡಕ್ಟರ್ ಶ್ರೀಕಾಂತ್ ಪಟೇಗಾರ್ ಎಂಬಾತ 33 ರೂ.ಗಳ ಟಿಕೆಟ್ ಕೊಟ್ಟಿದ್ದು, 20 ರೂ.ಗಳನ್ನು ಹಿಂದಕ್ಕೆ ತೋರಿಸುತ್ತಾ 3 ರೂ.ಗಳ ಚಿಲ್ಲರೆ ಕೊಡುವಂತೆ ದುಂಬಾಲು ಬಿದ್ದಿದ್ದರು. ಇಲ್ಲವೆಂದ ಕಾರಣಕ್ಕೆ ವಾಗ್ವಾದ ನಡೆಸಿದ ಕಂಡಕ್ಟರ್ ಚಾರ್ಮಾಡಿ ಘಾಟ್‌ನ ನಿರ್ಜನ ಪ್ರದೇಶದಲ್ಲಿ ಅಬ್ದುಲ್ ಹಮೀದ್‌ರನ್ನು ಬಸ್‌ನಿಂದ ಕೆಳಗಿಳಿಸಿ ಮುಂದೆ ಚಲಿಸಿದ್ದಾರೆ.

ಕೊಟ್ಟಿಗೆಹಾರದಿಂದ ಸುಮಾರು 5/6 ಕಿ.ಮೀ.ದೂರದಲ್ಲಿ ನಿರ್ಜನ ಅರಣ್ಯ ಪ್ರದೇಶದಲ್ಲಿ ವಿವಿಧ ವಾಹನಗಳನ್ನು ನಿಲ್ಲಿಸುವಂತೆ ಕೈತೋರಿಸಿದರೂ ಯಾರೂ ನಿಲ್ಲಿಸಿರಲಿಲ್ಲ.

ಸ್ವಲ್ಪ ದೂರ ನಡೆದು ನಂತರ ಮುಸ್ಲೀಮರಿದ್ದ ವಾಹನವೊಂದು ಅಬ್ದುಲ್ ಹಮೀದ್‌ರನ್ನು ಕೊಟ್ಟಿಗೆಹಾರಕ್ಕೆ ತಂದು ಬಿಟ್ಟಿದ್ದಾರೆ. ಕೊಟ್ಟಿಗೆಹಾರಕ್ಕೆ ಬಂದು ಕಕ್ಕಿಂಜೆ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಸಂಬಂಧಿಕರು ಚಾರ್ಮಾಡಿಯ ಚೆಕ್‌ಪೋಸ್ಟ್ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಪ್ರಯಾಣಿಕರ ದೂರವಾಣಿ ಸಂಖ್ಯೆ ಹಾಗೂ ಬಸ್ ಕಂಡಕ್ಟರ್‌ನ ಮಾಹಿತಿ ಪಡೆದು ಸುಮ್ಮನಾಗಿದ್ದಾರೆ.

ಪ್ರಯಾಣಿಕ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಕ್ಕಿಂಜೆಗೆ ತೆರಳಿದ ನಂತರ ಧರ್ಮಸ್ಥಳ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಬಸ್ ಕಂಡಕ್ಟರ್‌ನ ಅಮಾನವೀಯದಿಂದ ಪ್ರಯಾಣಿಕರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಸಾರಿಗೆ ಮಂತ್ರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯ ಸಾರಿಗೆಯ ಕೆ.ಎ.19 ಎಪ್ 3175 ಸಂಖ್ಯೆಯ ರಾಜ್ಯ ಸಾರಿಗೆ ಬಸ್ ನಮ್ಮ ಘಟಕಕ್ಕೆ ಸೇರಿದ್ದಾಗಿದೆ. ಯಾವುದೇ ಪ್ರಯಾಣಿಕರನ್ನು ನಿರ್ಜನ ಪ್ರದೇಶದಲ್ಲಿ ಇಳಿಸುವ ಕೃತ್ಯ ಸರಿಯಲ್ಲ. ಇಂತಹ ದೂರು ನಮ್ಮ ಘಟಕದ ಗಮನಕ್ಕೆ ಬಂದಿಲ್ಲ. ದೂರು ಬಂದರೆ ನಿರ್ವಾಹಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

- ಇಸ್ಮಾಯಿಲ್, ಘಟಕ ವ್ಯವಸ್ಥಾಪಕ, ಕೆಎಸ್‌ಆರ್‌ಟಿಸಿ ಬಿ.ಸಿ.ರೋಡ್ ಘಟಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News