ಮರ ಕಡಿಯುವುದನ್ನು ವಿರೋಧಿಸಿದ ಯುವತಿಯ ಹತ್ಯೆ
Update: 2017-03-27 22:53 IST
ಜೋಧ್‌ಪುರ, ಮಾ.27: ಮರ ಕಡಿಯುವುದನ್ನು ವಿರೋಧಿಸಿದ ಯುವತಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟುಕೊಂದು ಹಾಕಿದ ಘಟನೆ ರಾಜಸ್ಥಾನದ ಜೋಧಪುರ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ. ನಿನ್ನೆ ಗುಂಪೊಂದರ ಕೈಯಲ್ಲಿ ಬರ್ಬರವಾಗಿ ಕೊಲೆಯಾದ ಯುವತಿಯನ್ನು ಲಲಿತಾ(21) ಎಂದು ಗುರುತಿಸಲಾಗಿದೆ. ಗ್ರಾಮಕ್ಕೆ ರಸ್ತೆಗಾಗಿ ತನ್ನ ತೋಟದಿಂದ ಮರ ಕಡಿಯುವುದನ್ನು ಲಲಿತಾ ವಿರೋಧಿಸುತ್ತಿದ್ದಳು. ಇದರಿಂದ ಕೋಪಗೊಂಡ ಜನರ ಗುಂಪೊಂದು ಲಲಿತಾಳ ಮೇಲೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾದರೂ ಗಂಭೀರ ಸುಟ್ಟಗಾಯಗಳಾಗಿದ್ದ ಆಕೆ ಅಲ್ಲಿ ಅಸುನೀಗಿದ್ದಾಳೆ. ಗ್ರಾಮ ಮುಖ್ಯಸ್ಥ ರಣವೀರ್ ಸಿಂಗ್ ನೇತೃತ್ವದ ಹತ್ತು ಮಂದಿ ಲಲಿತಾಳಿಗೆ ಬೆಂಕಿ ಹಚ್ಚಿ ಸುಟ್ಟುಕೊಂದಿದ್ದಾರೆಂದು ಲಲಿತಾರ ಕುಟುಂಬದವರು ಆರೋಪಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.