" ಶಿಕ್ಷಕರ ಮೇಲೆ ಹೆಚ್ಚುತ್ತಿರುವ ಸರಕಾರದ ದಬ್ಬಾಳಿಕೆ"
ಬ್ರಹ್ಮಾವರ, ಮಾ.27: ಶಿಕ್ಷಕರ ಮೇಲಿನ ಸರಕಾರದ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಯಾವುದೇ ಸೌಲಭ್ಯಗಳನ್ನು ನೀಡದೇ ವಂಚಿಸುತ್ತಿದೆ ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಗಣೇಶ ಶೆಟ್ಟಿಗಾರ್ ಹೇಳಿದ್ದಾರೆ.
ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಸಭಾಭವನದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಆಶ್ರಯದಲ್ಲಿ ನಡೆದ ಪಿಂಚಣಿ ವಂಚಿತ ನೌಕರರ ಉಡುಪಿ ಜಿಲ್ಲಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯದ ಬಗ್ಗೆ ಯಾವಾಗಲೂ ಚಿಂತಿಸುವ ಅಧ್ಯಾಪಕರು ತಮ್ಮ ಭವಿಷ್ಯದ ಭದ್ರತೆಯನ್ನು ಕಳೆದುಕೊಂಡಿದ್ದಾರೆ. ಸರಕಾರ 2006ರ ಜೂನ್ ನಂತರ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುತ್ತಿರುವ ಅಧ್ಯಾಪಕರಿಗೆ ಪಿಂಚಣಿಯನ್ನು ನೀಡುತ್ತಿಲ್ಲ. ಕಾರ್ಮಿಕರಿಗೆ ಸಿಗುವ ಪಿಎಫ್, ಇಎಸ್‌ಐ ಸೌಲ್ಯ ಕೂಡಾ ದೊರಕುತ್ತಿಲ್ಲ. ನಿವೃತ್ತಿಯ ಸಮಯದಲ್ಲಿಯೂ ಆ ತಿಂಗಳ ವೇತನದೊಂದಿಗೆ ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಭವಿಷ್ಯಕ್ಕೆ ಯಾವುದೇ ಭದ್ರತೆಯನ್ನು ನೀಡದ ಸರಕಾರದ ಈ ಕ್ರಮಕ್ಕೆ ಎಲ್ಲರೂ ಒಂದಾಗಿ ಹೋರಾಟ ನಡೆಸಿ ಸೌಲ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ ಸರಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರಿಗೆ ಯಾವುದೇ ಸೇವಾ ಭದ್ರತೆ ನೀಡದೇ ನಿಕೃಷ್ಟವಾಗಿ ನೋಡಿಕೊಳ್ಳುತ್ತಿದೆ. ಅಧ್ಯಾಪಕರ ಇಡೀ ಕುಟುಂಬವನ್ನೇ ಅಂಧಕಾರದಲ್ಲಿ ಮುಳುಗಿಸಿದ ಸರಕಾರದ ಈ ಕ್ರಮ ಖಂಡನೀಯ.ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಸಂಘದ ಕಿರಣ್ ಕುಮಾರ್ ಹೆಗ್ಡೆ, ಸರಕಾರಿ ನೌಕರರ ಜಿಲ್ಲಾ ಸಂಚಾಲಕ ರವಿ ಎಸ್. ಶೆಟ್ಟಿ, ಕಾರ್ಯದರ್ಶಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಾಪಕ ಸಚಿನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಸನ್ನ ಕುಮಾರ್ ಶೆಟ್ಟಿ ವಂದಿಸಿದರು. ಪ್ರಕಾಶ್ ಮಾಕೋಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.