×
Ad

ತಾಯಂದಿರ ಅಪ್ಪುಗೆಯಿಂದ ಶಿಶುಗಳಿಗೆ ಆರೋಗ್ಯಭಾಗ್ಯ

Update: 2017-03-27 22:59 IST

ಹೊಸದಿಲ್ಲಿ, ಮಾ.27: ಗಾಢಾಲಿಂಗನ ಆರೋಗ್ಯ ವೃದ್ಧಿಗೆ ಪೂರಕ ಎಂದು ಸಮೀಕ್ಷೆಯೊಂದು ತಿಳಿಸಿದೆ. ಆದರೆ ಇಲ್ಲಿ ಹೇಳಲಾಗಿರುವ ಆಲಿಂಗನ ತಾಯಿ ಮತ್ತು ಮಗುವಿಗೆ ಸಂಬಂಧಿಸಿದ್ದು. ತಾಯಿಯ ಅಪ್ಪುಗೆ ಶಿಶುವಿಗೆ ಹಿತಾನುಭವ ನೀಡುವಂತೆಯೇ, ಶಿಶುವಿನ ಆರೋಗ್ಯ ವೃದ್ಧಿಗೂ ಪೂರಕವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ತಾಯಿಯ ಗಾಢಾಲಿಂಗನ ಮಗುವಿನಲ್ಲಿ ನಿರೋಧಕ ಶಕ್ತಿಯನ್ನು ವೃದ್ಧಿಸಿ, ಎದೆಬಡಿತವನ್ನು ಸ್ಥಿರೀಕರಿಸುತ್ತದೆ ಹಾಗೂ ದೇಹದ ಉಷ್ಣಾಂಶವನ್ನು ಕಾಪಾಡುತ್ತದೆ. ಅಲ್ಲದೆ ಶೇ.90ರಷ್ಟು ಶಿಶುಗಳು ತಮ್ಮ ತಾಯಂದಿರ ಅಪ್ಪುಗೆಯನ್ನು ಗುರುತಿಸುವ ಶಕ್ತಿ ಹೊಂದಿರುತ್ತವೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಶಿಶುಗಳ ಡಯಾಪರ್ ಉತ್ಪಾದಿಸುವ ‘ಹಗ್ಗೀಸ್’ ಸಂಸ್ಥೆ ದಿಲ್ಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತಾ ಮಹಾನಗರಗಳ 2 ಸಾವಿರಕ್ಕೂ ಹೆಚ್ಚು ತಾಯಂದಿರು ಮತ್ತು 500 ವೈದ್ಯರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಆಲಿಂಗನದಿಂದ ಮಗುವಿನ ದೇಹದ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ ಎಂದು ಶೇ.76ರಷ್ಟು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವೈಜ್ಞಾನಿಕ ಹಿನ್ನೆಲೆ ಮತ್ತು ಸಂಶೋಧನೆಯ ಮಾಹಿತಿಯ ಹೊರತಾಗಿಯೂ ಶೇ.80ರಷ್ಟು ತಾಯಂದಿರು ಗಾಢಾಲಿಂಗನದಿಂದ ಆರೋಗ್ಯ ವೃದ್ಧಿಸುವುದರ ಬಗ್ಗೆ ಮಾಹಿತಿ ಹೊಂದಿಲ್ಲ. ಶೇ.90ರಷ್ಟು ಭಾರತೀಯ ತಾಯಂದಿರು ಆಲಿಂಗನವು ಮಗುವಿನ ಬಗ್ಗೆ ಹೊಂದಿರುವ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾಧ್ಯಮವೆಂದು ಪರಿಗಣಿಸಿದ್ದಾರೆ. ಅಪ್ಪುಗೆಯು ಮಗುವಿನ ಆತಂಕವನ್ನು ಕಡಿಮೆ ಮಾಡಲು ಇರುವ ಒಂದು ಉಪಾಯ ಎಂಬುದು ಶೇ.91ರಷ್ಟು ಭಾರತೀಯ ತಾಯಂದಿರ ಅನಿಸಿಕೆಯಾಗಿದೆ. ಮಗುವಿಗೆ ಜನ್ಮ ನೀಡಿದಾಕ್ಷಣ ಅದನ್ನು ಅಪ್ಪಿಕೊಳ್ಳುವುದು ತಮಗೆ ಮಹದಾನಂದ ಮತ್ತು ನಿರಾಳ ಭಾವನೆ ನೀಡುತ್ತದೆ ಎಂದು ಶೇ.91ರಷ್ಟು ತಾಯಂದಿರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News