ಕೆಟ್ಟು ನಿಂತ ಕಾರವಾರ- ಪರ್ನೆಮ್ ಡೆಮೊ ರೈಲು
ಕಾರವಾರ, ಮಾ.27: ಕಾರವಾರ- ಪರ್ನೆಮ್ ಡೆಮೊ ರೈಲು ಸೋಮವಾರ ಕಾರವಾರದ ಅಸ್ನೋಟಿ ಎಂಬಲ್ಲಿ ಇಂಜಿನ್ ಕೆಟ್ಟಿನಿಂತ ಪರಿಣಾಮ ಪ್ರಯಾಣಿಕರು ಎರಡು ತಾಸು ರೈಲಿನಲ್ಲೇ ಕಳೆದ ಘಟನೆ ಸೋಮವಾರ ನಡೆದಿದೆ.
ಶಿರವಾಡ ರೈಲು ನಿಲ್ದಾಣದಿಂದ ಬೆಳಗ್ಗೆ ಹೊರಟ ಮೂರು ಬೋಗಿಯುಳ್ಳ ಈ ರೈಲು ಬೆಳಗ್ಗೆ ಅಸ್ನೋಟಿ ನಿಲ್ದಾಣ ತಲುಪಿತು. ನಂತರ ಸ್ವಲ್ಪಮುಂದೆ ಸಾಗುತ್ತಿದ್ದಂತೆ ಇಂಜಿನ್ ಸಮಸ್ಯೆಯಿಂದ ರೈಲು ಸಂಚಾರ ಅರ್ಧದಲ್ಲೇ ಸ್ಥಗಿತಗೊಂಡಿತು. ಗೋವಾಕ್ಕೆ ತೆರಳುತ್ತಿದ್ದ ಉದ್ಯೋಗಿಗಳು ಹಾಗೂ ಪ್ರಯಾಣಿಕರು ಇದರಿಂದ ಪರದಾಡುವಂತಾಗಿತು.
ಈ ರೈಲಿನ ದುಸ್ಥಿತಿಗೆ ಪ್ರಯಾಣಿಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಬಳಿಕ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಯಾಣಿಕರು, ಈ ಡೆಮೊ ರೈಲು ಆಗಾಗ ಇದೇ ರೀತಿ ಕೆಟ್ಟು ನಿಲ್ಲುತ್ತಿರುತ್ತದೆ. ಇದರಿಂದ ನೌಕರಿಗೆ ಸರಿಯಾದ ಸಮಯಕ್ಕೆ ತೆರಳಲು ಆಗುತ್ತಿಲ್ಲ. ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಈ ರೈಲಿಗೆ ಹೊಸ ಇಂಜಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಳಿಕ ಕೆಟ್ಟು ನಿಂತ ರೈಲಿಗೆ ಬೇರೆ ಇಂಜಿನ್ ಅಳವಡಿಸಿ ಪ್ರಯಾಣಿಕರನ್ನು ಕಳುಹಿಸಲಾಯಿತು.