ಪನಾಮ ದಾಖಲೆ: ದೆಹಲಿ ಉದ್ಯಮಿ ನಂಟು
ಹೊಸದಿಲ್ಲಿ, ಮಾ.28: ಪನಾಮ ದಾಖಲೆ ಬಹಿರಂಗದ ಹಿನ್ನೆಲೆಯಲ್ಲಿ ನಡೆಯುತ್ತಿರುವ ತನಿಖೆಯಿಂದ ಹೊಸ ವಿದೇಶಿ ಕಂಪೆನಿಗಳು ಬೆಳಕಿಗೆ ಬರುತ್ತಿದೆ. ಇಟೆಲಿ ಮೂಲದ ನೋಟು ಮುದ್ರಣ ಕಾಗದ ಸರಬರಾಜು ಕಂಪೆನಿಯಾದ ಫ್ಯಾಬ್ರಿಯಾನೊವನ್ನು ಪ್ರತಿನಿಧಿಸುತ್ತಿರುವ ದೆಹಲಿ ಉದ್ಯಮಿ ಸತ್ಯಪ್ರಕಾಶ್ ಗುಪ್ತಾ ಅವರ ವ್ಯವಹಾರದತ್ತ ಇದೀಗ ಸಂಶಯದ ಕಾರ್ಮೋಡ ಕವಿದಿದೆ.
2016ರ ನೋಟು ರದ್ದತಿ ಬಳಿಕ ತುರ್ತಾಗಿ ನೋಟು ಮುದ್ರಣ ಕಾಗದವನ್ನು ಸರಬರಾಜು ಮಾಡುವ ಗುತ್ತಿಗೆ ಪಡೆದ ಒಂಬತ್ತು ಕಂಪೆನಿಗಳ ಪೈಕಿ ಫ್ಯಾಬ್ರಿಯಾನೊ ಕೂಡಾ ಒಂದಾಗಿದೆ. ಪನಾಮಾ ದಾಖಲೆ ಬಹಿರಂಗಗೊಂಡ ವೇಳೆ ಬಹಿರಂಗವಾದ 400 ಹೆಸರುಗಳ ಪೈಕಿ ಇವರ ಹೆಸರೂ ಸೇರಿತ್ತು. ಹಲವು ಬಾರಿ ಗುಪ್ತಾ ಅವರಿಗೆ ಸಮನ್ಸ್ ನೀಡಿದ ಬಳಿಕ ಆದಾಯ ತೆರಿಗೆ ಇಲಾಖೆ ಅವರ ಕಚೇರಿ ಹಾಗೂ ನಿವಾಸದ ಮೇಲೆ ಕಳೆದ ಡಿಸೆಂಬರ್‌ನಲ್ಲಿ ದಾಳಿ ನಡೆಸಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಪ್ರಯಾಣ ನಿರ್ಬಂಧಿಸಿ ಹಲವು ದಿನಗಳ ಕಾಲ ವಿಚಾರಣೆಗೆ ಗುರಿಪಡಿಸಿತ್ತು. ಮಾರ್ಚ್ 20ರಂದು ಇಟೆಲಿಗೆ ಪ್ರಯಾಣ ಬೆಳೆಸುವ ಅವರ ಪ್ರಯತ್ನಕ್ಕೆ ಅಧಿಕಾರಿಗಳು ತಡೆ ಒಡ್ಡಿದ್ದರು.
2016ರ ಡಿಸೆಂಬರ್ ದಾಳಿಯಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳನ್ನು ಪರಿಶೀಲಿಸಿದಾಗ, ಅಘೋಷಿತ ಸಾರಗೋತ್ತರ ಕಂಪೆನಿಗಳನ್ನು ಮೊಸ್ಸಾಕ್ ಫೊನ್ಸೆಕಾ ಹುಟ್ಟುಹಾಕಿದ್ದು ಪತ್ತೆಯಾಗಿದೆ. ಸಮೋವಾದಲ್ಲಿ ನೋಂದಣಿಯಾದ ಕಂಪೆನಿಯೊಂದರಿಂದ ಗುಪ್ತಾ 70 ಲಕ್ಷ ಯೂರೊ ಹಾಗೂ ಆಂಗ್ಲೋ ಮಾನ್‌ಸ್ಕ್ ಎಂಬ ಇಸ್ಲೆ ಕಂಪೆನಿಯಿಂದ 40 ಲಕ್ಷ ಯೂರೋ ಪಡೆದಿರುವುದಕ್ಕೆ ಪುರಾವೆಗಳು ಲಭ್ಯವಾಗಿವೆ ಎಂದು ಆದಾಯ ತೆರಿಗೆ ಇಲಾಖೆ, ಕಾನೂನು ಜಾರಿ ನಿರ್ದೇಶನಾಲಯಕ್ಕೆ ನೀಡಿದ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಿದೆ. ಈ ಟಿಪ್ಪಣಿಯ ವಿವರಗಳು ಲಭ್ಯವಾಗಿವೆ ಎಂದು ’ಇಂಡಿಯನ್ ಎಕ್ಸ್‌ಪ್ರೆಸ್‌ಗೆ’ ಹೇಳಿಕೊಂಡಿದೆ.
2015ರ ಡಿಸೆಂಬರ್ ಹಾಗೂ 2016ರ ಮಾರ್ಚ್ ನಡುವೆ ಈ ಹಣ ಸ್ವೀಕರಿಸಲಾಗಿದೆ. ನೆಕ್ಸ್ಟ್ ಜನರೇಶನ್ ಜನರಲ್ ಟ್ರೇಡಿಂಗ್ ಎಲ್‌ಎಲ್‌ಸಿಯ ಬೆಂಬಲ ಹಾಗೂ ದೃಢೀಕರಣಕ್ಕಾಗಿ ಸಾಲದ ರೂಪದಲ್ಲಿ ಇದನ್ನು ನೀಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ಈ ಕಂಪೆನಿಯು ಯುಎಇ ಉದ್ಯಮಿ ರಾಸ್ ಅಲ್ ಖೈಮಾ ಅವರು ಆರಂಭಿಸಿದ ಕಂಪೆನಿಯಾಗಿದ್ದು, ಇದರ ಜತೆ ಗುಪ್ತಾ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ.