ತಲಾಖ್: ವೈಯಕ್ತಿಕ ಕಾನೂನು ಮಂಡಳಿ ಬಿಗಿ ನಿಲುವು
ಹೊಸದಿಲ್ಲಿ, ಮಾ.28: ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡುವುದನ್ನು ಕಾನೂನುಬಾಹಿರ ಎಂದು ಘೋಷಿಸುವ ಕ್ರಮಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತೀವ್ರ ವಿರೋಧ ವ್ಯಕ್ತಪಡಿಸಿದೆ. "ಈ ಕ್ರಮ ಅಲ್ಲಾಹ್ ನೀಡಿರುವ ಸೂಚನೆಗೆ ಅಗೌರವ ತೋರಿದಂತೆ ಮತ್ತು ಮುಸ್ಲಿಮರು ಪಾಪ ಎಸಗಲು ಪವಿತ್ರ ಕುರ್ ಆನ್ ಅನ್ನು ಮರು ಬರೆದಂತಾಗುತ್ತದೆ" ಎಂದು ಸ್ಪಷ್ಟಪಡಿಸಿದೆ.
ಸಂವಿಧಾನದ 25ನೆ ವಿಧಿ ಅನ್ವಯ ಸೂಕ್ತ ಧರ್ಮದ ಆಯ್ಕೆ ಹಾಗೂ ಅನುಸರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಇದು ವೈಯಕ್ತಿಕ ಕಾನೂನು ಅನುಸರಿಸಲು ಅನುವು ಮಾಡಿಕೊಡುತ್ತದೆ. ಪವಿತ್ರ ಕೃತಿಯ ಇಂಥ ಹೇಳಿಕೆಗಳನ್ನು ಅಗೌರವದಿಂದ ಕಾಣಲು ಅವಕಾಶ ಮಾಡಿಕೊಟ್ಟರೆ, ಇಸ್ಲಾಂ ಪತನಕ್ಕೆ ಅದು ಕಾರಣವಾಗುತ್ತದೆ. ಒಂದೇ ಬಾರಿಗೆ ತ್ರಿವಳಿ ತಲಾಕ್ ಘೋಷಿಸುವುದು ಇಸ್ಲಾಂನಲ್ಲಿ ವಿಚಿತ್ರ ವಿಚ್ಛೇದನ ಕ್ರಮವಾಗಿದ್ದರೂ, ಕುರ್ ಆನ್ ಚರಣಗಳಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇರುವ ಹಿನ್ನೆಲೆಯಲ್ಲಿ ಅದನ್ನು ಅಮಾನ್ಯ ಎಂದು ಘೋಷಿಸುವಂತಿಲ್ಲ ಎಂದು ಎಐಎಂಪಿಎಲ್‌ಬಿ ಸ್ಪಷ್ಟಪಡಿಸಿದೆ.
ತ್ರಿವಳಿ ತಲಾಖ್ ಪ್ರಕರಣದ ಅಂತಿಮ ವಿಚಾರಣೆಗೆ ಮೂರು ದಿನ ಮೊದಲು ಸುಪ್ರೀಂಕೋರ್ಟ್‌ಗೆ ಲಿಖಿತ ಹೇಳಿಕೆ ಸಲ್ಲಿಸಿರುವ ಎಐಎಂಪಿಎಲ್‌ಬಿ, "ಸಹಜವಾಗಿ ’ಹಲಾಲ’ ಪ್ರಕ್ರಿಯೆ ನಡೆಯದಿದ್ದರೆ ತ್ರಿವಳಿ ತಲಾಖ್ ಘೋಷಿಸಿದ ಬಳಿಕ, ಮಾಜಿ ಗಂಡನಿಗೆ ಆ ಪತ್ನಿ ಪರಸ್ತ್ರೀಯಾಗುತ್ತಾಳೆ. ಮೂರನೇ ತಲಾಖ್ ಬಗ್ಗೆ ಕುರ್ ಆನ್ ನಲ್ಲಿ ಸ್ಪಷ್ಟ ಉಲ್ಲೇಖವಿದೆ" ಎಂದು ಪ್ರತಿಪಾದಿಸಿದೆ.
ಇಂಥ ಸಂದರ್ಭದಲ್ಲಿ ಮಾಜಿ ಗಂಡ ಮತ್ತೆ ತನ್ನ ಹಳೆಯ ಪತ್ನಿಯನ್ನು ಪಡೆಯಬೇಕಿದ್ದರೆ ಮರು ವಿವಾಹವಾಗಬೇಕಾಗುತ್ತದೆ. ಆಕೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಿರದಿದ್ದರೆ ಅಥವಾ ಮರುವಿವಾಹವಾದ ಪತಿ ಮೃತಪಟ್ಟರೆ ಇಲ್ಲವೇ ವಿಚ್ಛೇದನ ನೀಡಿದರೆ ಮಾತ್ರ ಇದಕ್ಕೆ ಅವಕಾಶ ಇರುತ್ತದೆ. ಇದರ ಮುಖ್ಯ ಉದ್ದೇಶವೆಂದರೆ ವಿಚ್ಛೇದಿತ ಪತ್ನಿ ತನ್ನ ಆಯ್ಕೆಯ ವ್ಯಕ್ತಿಯನ್ನು ಮತ್ತೆ ವಿವಾಹವಾಗಲು ಅವಕಾಶ ಮಾಡಿಕೊಡುವುದು ಎಂದು ಸ್ಪಷ್ಟಪಡಿಸಿದೆ.