×
Ad

ದೇಶದಾದ್ಯಂತ ಗೋಹತ್ಯೆ ನಿಷೇಧಿಸಿ ಸಮಾನ ಕಾನೂನು ಜಾರಿಗೆ ತನ್ನಿ: ಆಝಂ ಖಾನ್

Update: 2017-03-28 11:30 IST

ಲಕ್ನೋ, ಮಾ.28: ದೇಶದಾದ್ಯಂತ ಗೋ ಹತ್ಯೆಯನ್ನು ನಿಷೇಧಿಸಿ ಸಮಾನ ಕಾನೂನನ್ನು ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್.

‘‘ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯಗಳಲ್ಲಿ ಗೋಹತ್ಯೆ ಸಕ್ರಮವಾಗಿರುವಾಗ ಇತರ ರಾಜ್ಯಗಳಲ್ಲಿ  ಏಕಿಲ್ಲ ? ನಾನು ಗೋಹತ್ಯೆ ನಿಷೇಧವನ್ನು ಬೆಂಬಲಿಸುತ್ತೇನೆ. ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚಬೇಕು,’’ ಎಂದು ಹೇಳಿದ್ದಾರೆ ಖಾನ್.

ಕೇವಲ ಪರವಾನಗಿಯಿರುವ ಕಸಾಯಿಖಾನೆಗಳು ಮಾತ್ರ ಕಾರ್ಯಾಚರಿಸಬಹುದೆನ್ನುವ ಉತ್ತರ ಪ್ರದೇಶ ಸರಕಾರದ ನಿಲುವನ್ನು ಪ್ರಶ್ನಿಸಿದ ಅವರು ‘‘ಹಾಗಾದರೆ ಕಾನೂನುಬದ್ಧ ಕಸಾಯಿಖಾನೆಗಳಲ್ಲಿ ಪ್ರಾಣಿಗಳನ್ನು ಹತ್ಯೆಗೈದರೆ ಏನೂ ತೊಂದರೆಯಿಲ್ಲವೇ ? ಅಕ್ರಮ ಕಸಾಯಿಖಾನೆಗಳಲ್ಲೂ ಹೀಗೆಯೇ ಮಾಡಲಾಗುತ್ತಿದೆಯಲ್ಲವೇ?’’ ಎಂದರು.

ಮುಸ್ಲಿಮರು ಗೋಮಾಂಸವನ್ನು ತಿನ್ನುವುದನ್ನು ನಿಲ್ಲಿಸಬೇಕೆಂದೂ ಅವರು ಸಲಹೆ ನೀಡಿದರು. ಮುಸ್ಲಿಮರು ಮಾಂಸ ಸೇವಿಸಬೇಕೆಂದು ಇಸ್ಲಾಂನಲ್ಲಿ ಎಲ್ಲಿಯೂ ಹೇಳಿಲ್ಲ, ಎಂದೂ ಅವರು ಹೇಳಿದರು.

ಕಾನೂನುಬದ್ಧವಾಗಿ ಪರವಾನಿಗೆ ಹೊಂದಿರುವ ಕಸಾಯಿಖಾನೆಗಳಿಗೆ ತೊಂದರೆಯುಂಟು ಮಾಡುವುದಿಲ್ಲ, ಅಕ್ರಮ ಕಸಾಯಿಖಾನೆಗಳ ಮೇಲಷ್ಟೇ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಜ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಈಗಾಗಲೇ ಸ್ಪಷ್ಟ ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News