×
Ad

ಭಾರತ ಹಿಂದೂ ರಾಷ್ಟ್ರವಾಗಲು ಭಾಗ್ವತ್ ರನ್ನು ರಾಷ್ಟ್ರಪತಿ ಮಾಡಿ: ಬಿಜೆಪಿಗೆ ಶಿವಸೇನೆ ಆಗ್ರಹ

Update: 2017-03-28 11:44 IST

ಮುಂಬೈ, ಮಾ.28: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಪರಿಗಣಿಸಬೇಕೆಂದು ಶಿವಸೇನೆ ಆಗ್ರಹಿಸಿದೆ. ‘‘ಹಿಂದೂ ರಾಷ್ಟ್ರದ ಕನಸನ್ನು ಈಡೇರಿಸಬೇಕಾದರೆ ಭಾಗ್ವತ್ ಅವರನ್ನು ರಾಷ್ಟ್ರಪತಿಯಾಗಿಸಬೇಕು’’ ಎಂದು ಹಿರಿಯ ಶಿವಸೇನೆ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಈಗಾಗಲೇ ಆರೆಸ್ಸೆಸ್ ಜತೆ ನಿಕಟ ಸಂಬಂಧ ಹೊಂದಿರುವವರನ್ನು ಮುಖ್ಯಮಂತ್ರಿಗಳನ್ನಾಗಿಸಿದ ಬಿಜೆಪಿ ರಾಷ್ಟ್ರಪತಿ ಹುದ್ದೆಗೆ ಭಾಗ್ವತ್ ಅವರನ್ನು ನೇಮಿಸಲು ಹಿಂಜರಿಯಬಾರದು ಎಂದು ಅವರು ಹೇಳಿದ್ದಾರೆ. ರಾಷ್ಟ್ರಪತಿ ಚುನಾವಣೆ ಜುಲೈ ತಿಂಗಳಲ್ಲಿ ನಡೆಯಲಿರುವುದನ್ನು ಇಲ್ಲಿ ಸ್ಮರಿಸಬಹುದು.
‘‘ಬಹಳ ಸಮಯದ ನಂತರ ದೇಶದಲ್ಲಿ ಹಿಂದುತ್ವದ ವಾತಾವರಣವಿದೆ. ಹಿಂದುತ್ವವಾದಿ ನಾಯಕರೊಬ್ಬರು ನರೇಂದ್ರ ಮೋದಿ ರೂಪದಲ್ಲಿ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ಇತ್ತೀಚೆಗೆ ಇನ್ನೊಬ್ಬ ಹಿಂದುತ್ವ ನಾಯಕರೊಬ್ಬರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿಸಲಾಗಿದೆ. ಹೀಗಿರುವಾಗ ಭಾಗ್ವತ್ ಅವರನ್ನು ರಾಷ್ಟ್ರಪತಿಯನ್ನಾಗಿಸಿದರೆ ಹಿಂದೂ ರಾಷ್ಟ್ರದ ಪರಿಕಲ್ಪನೆ ನಿಜವಾಗುವುದು,’’ಎಂದು ರಾವತ್ ಹೇಳಿದರು.

‘‘ರಾಮ ಮಂದಿರ, ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ ಪರಿಚ್ಛೇಧ 370, ಸಮಾನ ನಾಗರಿಕ ಸಂಹಿತೆ ವಿಚಾರಗಳು ಪ್ರಧಾನಿ ಹಾಗೂ ಭಾಗ್ವತ್ ಅವರಿಗೆ ತೀರಾ ಹತ್ತಿರದವು. ಈ ಅಜೆಂಡಾಗಳನ್ನು ಭಾಗ್ವತ್ ಅವರನ್ನು ರಾಷ್ಟ್ರಪತಿಯನ್ನಾಗಿಸಿದರೆ ಪೂರೈಸಬಹುದು,’’ ಎಂದು ಶಿವಸೇನೆ ನಾಯಕ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News